ಬೆಂಗಳೂರು: ರಾಷ್ಟ್ರೀಯ ಸಂಘರ್ಷ ಸಮಿತಿ ಹಾಗೂ ಬಿಎಂಟಿಸಿ & ಕೆಎಸ್‌ಆರ್‌ಟಿಸಿ ವತಿಯಿಂದ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನಾ ಸಭೆ ಹಾಗೂ ಮನವಿ ಪತ್ರ ಸಲ್ಲಿಸುವ ಕಾರ್ಯಕ್ರಮವನ್ನು ಆಗಸ್ಟ್ 27, 2024 ರಂದು ಬೆಳಗ್ಗೆ 11ಗಂಟೆಗೆ ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ತೀವ್ರ ಸಂಕಷ್ಟದಲ್ಲಿರುವ 78 ಲಕ್ಷ ನಿವೃತ್ತರಿಗೆ ನ್ಯಾಯ ಸಮ್ಮತ ಪಿಂಚಣಿ ನೀಡದೆ, ಕೇಂದ್ರ ಸರ್ಕಾರವು ಇದೆ ಆಗಸ್ಟ್ 24ರಂದು ತನ್ನ ಸಂಪುಟ ಸಭೆಯಲ್ಲಿ ಹಾಲಿ ಕೇಂದ್ರ ಸರ್ಕಾರದ ಸೇವೆಯಲ್ಲಿರುವ ಎಲ್ಲ 23 ಲಕ್ಷ ನೌಕರರಿಗೆ ನೀಡಿರುವ ಕೊಡುಗೆಯನ್ನು ಗಮನಿಸಿದರೆ ಕೇಂದ್ರ ಸರ್ಕಾರದ ತಾರತಮ್ಯ ಧೋರಣೆ ಎದ್ದು ಕಾಣುತ್ತಿದೆ.
ನಾವೆಲ್ಲರೂ ಸೇವೆಯಿಂದ ನಿವೃತ್ತರಾಗಿ ವಯೋ ವೃದ್ಧರಾಗಿದ್ದೇವೆ, ನಮ್ಮ ಅಗತ್ಯ ಇಲ್ಲ ಎಂದು ಭಾವಿಸಿದ್ದರೆ ಮುಂಬರುವ ನಾಲ್ಕು ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಶಕ್ತಿ ಏನೆಂದು ನಿಮಗೆ ತಿಳಿಯುತ್ತದೆ!!!. ಅಸತ್ಯವೇ ಸತ್ಯ ಎಂದು ಪ್ರತಿಪಾದಿಸುವ ಸರ್ಕಾರದ ನಿಲುವಿನಲ್ಲಿ ಯಾವುದೇ ಬದ್ಧತೆ ಇಲ್ಲ. ದುರಾದೃಷ್ಟವೋ ಏನೋ ಅಮಾಯಕ ಜೀವಗಳು ಇಳಿ ವಯಸ್ಸಿನಲ್ಲಿ ನೆಲೆ ಕಾಣದೆ ಕಮರಿ ಹೋಗುತ್ತಿವೆ.
ಇಪಿಎಫ್ಓ ಅಧಿಕಾರಿಗಳು ಆಗಸ್ಟ್ 27 ರಂದು “ನಿಧಿ ಆಪ್ಕೆ ನಿಕಟ್” ಕಾರ್ಯಕ್ರಮವನ್ನು ದೇಶಾದ್ಯಂತ ಇರುವ ಎಲ್ಲ ಪಿಎಫ್ ಕಚೇರಿ ಆವರಣದಲ್ಲಿ ನಡೆಸುತ್ತಿದ್ದು, ನಿವೃತ್ತರ ಎಲ್ಲ ಕುಂದುಕೊರತೆಗಳನ್ನು ಈಡೇರಿಸುತ್ತೇವೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿರುತ್ತಾರೆ. ನವೆಂಬರ್ 04, 2022 ರಂದು ಸರ್ವೋಚ್ಚ ನ್ಯಾಯಾಲಯವು ಇಪಿಎಸ್ ನಿವೃತ್ತರ ಪರ ನೀಡಿರುವ ತೀರ್ಪನ್ನು ಇನ್ನೂ ಏಕೆ? ಅನುಷ್ಠಾನಗೊಳಿಸಿಲ್ಲ!!!.
ಮೇ 31ರ ಒಳಗೆ ನ್ಯಾಯಾಲಯದ ಆದೇಶವನ್ನು ಅನುಷ್ಠಾನಗೊಳಿಸುತ್ತೇವೆ ಎಂದು ಅವರೇ ನಿಗದಿಪಡಿಸಿದ್ದ, ಗಡುವು ಏನಾಯಿತು?. ಈ ಎಲ್ಲ ಪ್ರಶ್ನೆಗಳಿಗೆ ಇಪಿಎಫ್ಒ ಅಧಿಕಾರಿಗಳು ಉತ್ತರಿಸಬೇಕಾಗುತ್ತದೆ. ಏನೇ ಆಗಲಿ ಗುರಿ ಮುಟ್ಟುವ ವಿಶ್ವಾಸವಿದೆ ಎಂದು ಬಿಎಂಟಿಸಿ & ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ ಕಾರ್ಯಾಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
ಜುಲೈ 31 ಹಾಗೂ ಆಗಸ್ಟ್ 1 ರಂದು ದೆಹಲಿಯಲ್ಲಿ ಕಮಾಂಡರ್ ಅಶೋಕ್ ರಾವುತ್ ಅವರ ನೇತೃತ್ವದಲ್ಲಿ ಜರುಗಿದ ಇಪಿಎಸ್ ನಿವೃತ್ತರ ಬೃಹತ್ ಪ್ರತಿಭಟನೆಗೆ ಸಂಬಂಧಿಸಿದಂತೆ ನಿವೃತ್ತರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮದ ಬಗ್ಗೆ ಆಗ್ರಹಿಸಿ, ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಖಾತೆ (minister for labour & employment) ಸಚಿವ ಮನ್ಸೂಖ್ ಮಾಂಡವಿಯ ಅವರಿಗೆ ಉಲ್ಲೇಖಿಸಿರುವ ಮನವಿ ಪತ್ರವನ್ನು ನೀಡಲಾಗುವುದು.
2014ಕ್ಕೆ ಮೊದಲು ಅಥವಾ ನಂತರ ನಿವೃತ್ತರಾದವರು ಎಂದು ತಾರತಮ್ಯ ಮಾಡದೆ ಎಲ್ಲ ನಿವೃತ್ತರಿಗೂ ನ್ಯಾಯ ಸಮ್ಮತ ಪಿಂಚಣಿ ನೀಡಬೇಕು. ನಮ್ಮ ಎಲ್ಲ ಮನವಿ ಪತ್ರಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಉತ್ತರಿಸಬೇಕು ಎಂದು ಒತ್ತಯಿಸಲಾಗುವುದು ಎಂದು ತಿಳಿಸಿದ್ದಾರೆ.
ಎಲ್ಲ ಇಪಿಎಸ್ ನಿವೃತ್ತರು ಎಚ್ಚೆತ್ತುಕೊಂಡು ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ರಾಷ್ಟ್ರೀಯ ಸಂಘರ್ಷ ಸಮಿತಿ ಮುಖ್ಯ ಸಂಯೋಜಕರಾದ ರಮಾಕಾಂತ ನರಗುಂದ ಹಾಗೂ ರಾಜ್ಯಾಧ್ಯಕ್ಷರಾದ ಜಿಎಸ್ಎಂ ಸ್ವಾಮಿ ಹಾಗೂ ಇತರೆ ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದು, ನಮ್ಮ ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಪ್ರಸ್ತುತಪಡಿಸಲಿದ್ದಾರೆ ಎಂದು ತಿಳಿಸಿದ್ದಾರೆ.