ಬೆಂಗಳೂರು: ಕೇಂದ್ರದ ಮಾಜಿ ಸಚಿವ ಮತ್ತು ಕರ್ನಾಟಕ ಕಾಂಗ್ರೆಸ್ ಹಿರಿಯ ಮುಖಂಡ ಎಂ.ವಿ. ರಾಜಶೇಖರನ್ (91) ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.
ಅನೇಕ ಅಂಗಗಳ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನಹೊಂದಿದ್ದಾರೆ.
2004 ರಲ್ಲಿ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ರಾಜಶೇಖರನ್ ಅವರು, 1967 ರಲ್ಲಿ ಚುನಾವಣಾ ರಾಜಕೀಯದಲ್ಲಿ ಪಾದಾರ್ಪಣೆ ಮಾಡಿದರು, ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ಸಚಿವರಾಗಿಯೂ ಸೇವೆ ಸಲ್ಲಿದ್ದಾರೆ.
ಕನಕಪುರದ ಮರಳವಾಡಿಯಲ್ಲಿ ಜನಿಸಿದ ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದರು. ಭಾರತೀಯ ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದ ವಿದ್ಯಾರ್ಥಿ ನಾಯಕರಾಗಿ, ರಾಜಶೇಖರನ್ 1966 ರಲ್ಲಿ ಮೈಸೂರು ಪ್ರದೇಶ ಯುವ ಕಾಂಗ್ರೆಸ್ ಸೇರಿದರು. ಇದಕ್ಕೂ ಮೊದಲು ವಿವಿಧ ರೈತ ಸಂಘಗಳೊಂದಿಗೆ ಗುರುತಿಸಿಕೊಂಡು ಮುಂಚೂಣಿ ನಾಯಕನಾಗಿದ್ದರು. ಮೃತರು ಪತ್ನಿ ಇಬ್ಬರು ಪುತ್ರರು, ಪುತ್ರಿಯರನ್ನು ಅಗಲಿದ್ದಾರೆ.
ಸಿಎಂ ಬಿಎಸ್‌ವೈ ಸಂತಾಪ
ರಾಜಶೇಖರನ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂತಾಪ ಸೂಚಿಸಿದರು. ಒಬ್ಬ ಸರಳ, ನಮ್ರತೆ ಮತ್ತು ದೊಡ್ಡ ಪ್ರಬುದ್ಧತೆಯೊಂದಿಗೆ ರಾಜಕಾರಣ ಮಾಡಿದ ಸಜ್ಜನಿಕೆಯ ರಾಜಕಾರಿಣಿ ಎಂದು ನೆನಪಿಸಿಕೊಂಡರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಂತಾಪ
ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಎಂ.ವಿ ರಾಜಶೇಖರನ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.
ಎಂ.ವಿ. ರಾಜಶೇಖರನ್ ಅವರು ಕಾಂಗ್ರೆಸ್ ಪಕ್ಷವನ್ನು ಕಟ್ಟಿದ ನಾಯಕರಲ್ಲಿ ಒಬ್ಬರು. ಪಕ್ಷಕ್ಕೆ ಅವರ ಕೊಡುಗೆ ಅಪಾರ. ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ ಹಾಗೂ ರಾಜ್ಯ ಸಭೆಯ ಸದಸ್ಯರಾಗಿದ್ದ ಅವರ ಪಕ್ಷನಿಷ್ಠೆ ಆದರ್ಶನೀಯ.
ಅವರು ಪಕ್ಷದ ಶಿಸ್ತಿನ ಸಿಪಾಯಿ. ಜೀವನದಲ್ಲೂ ಬಹಳ ಶಿಸ್ತು ಬದ್ಧರಾಗಿದ್ದರು. ಪ್ರತಿಯೊಬ್ಬರ ಜತೆಗೂ ಸ್ನೇಹದಿಂದ ಬೆರೆಯುತ್ತಿದ್ದರು. ಅಜಾತಶತ್ರುವಾಗಿ ಬದುಕಿದರು ಎಂದು ಶಿವಕುಮಾರ್ ಅವರು ಸ್ಮರಿಸಿದ್ದಾರೆ.
ಅವರ ಬದುಕು ನಮಗೆ ಆದರ್ಶ. ಅವರು ಮಾರ್ಗದರ್ಶಕರಾಗಿ ನಮ್ಮನ್ನು ಮುನ್ನಡೆಸಿದ್ದರು. ಇಂದು ಅವರನ್ನು ಕಳೆದುಕೊಂಡಿದ್ದೇವೆ. ಇದು ನಮಗೆ ತುಂಬಲಾರದ ನಷ್ಟ ಎಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ್ದೆ. ಅವರು ಇಂದು ನಮ್ಮನ್ನು ಅಗಲಿದ್ದಾರೆ ಎಂಬ ಸುದ್ದಿ ಕೇಳಿ ಮನಸಿಗೆ ಬಹಳ ಬೇಸರವಾಗಿದೆ. ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು, ಬೆಂಬಲಿಗರಿಗೆ ಆ ಭಗವಂತ ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಡಿ.ಕೆ. ಶಿವಕುಮಾರ್ ತಮ್ಮ ಶೋಕ ವ್ಯಕ್ತಪಡಿಸಿದ್ದಾರೆ.