ಸಿಲಿಂಡರ್ ಬದಲಾಯಿಸುವ ವೇಳೆ ಗ್ಯಾಸ್ ಸೋರಿಕೆಯಾಗಿ ಹೊತ್ತಿಕೊಂಡ ಬೆಂಕಿ: ಗಂಭೀರ ಗಾಯಗೊಂಡಿದ್ದ ಇಬ್ಬರು ಮೃತ

ಹುಣಸೂರು: ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬದಲಾಯಿಸುವ ವೇಳೆ ಬೆಂಕಿ ತಗುಲಿ ಗಂಭೀರ ಗಾಯಗೊಂಡಿದ್ದ ಐವರ ಪೈಕಿ ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ನಗರದ ಕಲ್ಕುಣಿಕೆ ಬಡಾವಣೆಯಲ್ಲಿ ನಡೆದಿದೆ.
ನಗರದ ಕಲ್ಕುಣಿಕೆ ಕುರ್ಜನ್ ಬೀದಿಯ ನಿವಾಸಿಗಳಾದ ನಿಂಗರಾಜ್ ಎಂಬುವರ ಪತ್ನಿ ಜ್ಯೋತಿ (38) ಹಾಗೂ ಲೇ.ಜಯರಾಮ ಎಂಬುವರ ಪತ್ನಿ ನಾಗಮ್ಮ (55) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ನಗರದ ಕಲ್ಕುಣಿಕೆ ಕುರ್ಜನ್ ಬೀದಿಯ ಆಟೋ ಚಾಲಕ ನಿಂಗರಾಜು ಅವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬದಲಾಯಿಸುವ ವೇಳೆ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಐವರಿಗೆ ತೀವ್ರ ಸುಟ್ಟ ಗಾಯಗಳಾಗಿತ್ತು.
ಬಳಿಕ ಅವರನ್ನು ಹುಣಸೂರಿನ ಕಾವೇರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ಆದರೆ ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಯ ಸುಟ್ಟಗಾಯ ವಿಭಾಗಕ್ಕೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜ್ಯೋತಿ ಹಾಗೂ ನಾಗಮ್ಮ ಅಸುನೀಗಿದ್ದಾರೆ.
ಇನ್ನು ನಿಂಗರಾಜ್, ರಾಣಿಯಮ್ಮ, ಶೀಲ ಸೇರಿದಂತೆ ಮೂವರು ಕೆ.ಆರ್.ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಂಗರಾಜು ಅವರ ಮಕ್ಕಳು ಅಜ್ಜಿಯ ಮನೆಗೆ ತೆರಳಿದ್ದರಿಂದ ಯಾವುದೇ ಅನಾಹುತವಾಗಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
Related
