ನೆಲಮಂಗಲ: ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಬಸ್ ಚಾಲಕ ಬಸ್ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ನಿಧನರಾಗಿರುವ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.
ಬಿಎಂಟಿಸಿ ಡಿಪೋ 40ರ ಚಾಲಕ ಕಿರಣ್ ಕುಮಾರ್ (39) ಬಿಲ್ಲೆ ಸಂಖ್ಯೆ 24921 ನಿಧನರಾದವರು. ಇನ್ನು ಬಸ್‌ನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು.
ಚಾಲಕ ಕಿರಣ್ ಕುಮಾರ್ ಹೃದಯಾಘಾತಕ್ಕೆ ಒಳಗಾಗಿ ಸ್ಟೇರಿಂಗ್ ಬಿಟ್ಟು ಕೆಳಕ್ಕೆ ಬೀಳುತ್ತಿದ್ದಂತೆ ಅದೇ ಬಸ್ ಕಂಡಕ್ಟರ್ ಓಬಳೇಶ್ ಅವರು ಚಾಲಕನ ಸೀಟಿನ ಮೇಲೆ ಹಾರಿ ಸ್ಟೇರಿಂಗ್ ಅನ್ನು ನಿಯಂತ್ರಿಸಿದರು. ಇದರಿಂದ ಭಾರಿ ಅನಾಹುತವೊಂದು ತಪ್ಪಿದಂತ್ತಾಗಿದೆ.
ಇನ್ನು ಹೃದಯಾಘಾತಕ್ಕೆ ಒಳಗಾಗಿ ಚಾಲಕರ ಸೀಟ್‌ನಿಂದ ಕೆಳಗೆ ಬಿದ್ದ ಕೂಡಲೇ ಕಿರಣ್ ಕುಮಾರ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ ಆಸ್ಪತ್ರೆಗೆ ಹೋಗುವ ಮುನ್ನವೇ ಕಿರಣ್ ಕೊನೆಯುಸಿರೆಳೆದಿದ್ದರು.
ಬಿಎಂಟಿಸಿ ಘಟಕ 40ರ ಬಸ್ (ಮಾರ್ಗ 256 ಎಂ/1) ನೆಲಮಂಗಲ ಬಸ್ ನಿಲ್ದಾಣದಿಂದ ಬೆಳಗ್ಗೆ 11 ಗಂಟೆಗೆ ಹೊರಟ ಬಸ್ ಚಾಲಕ ಕಿರಣ್ ಕುಮಾರ್‌ಗೆ ಹೃದಯಾಘಾತವಾಗಿ ಸ್ಟೇರಿಂಗ್ ಬಿಟ್ಟ ಕೂಡಲೇ ಮುಂದೆ ಹೋಗುತ್ತಿದ್ದ 26ನೇ ಡಿಪೋದ KA 57 F 5932 ಬಸ್ ಡಿಕ್ಕಿ ಹೊಡೆದಿದೆ.
ಇನ್ನು ಚಾಲಕನಿಗೆ ಹೃದಯಾಘಾತವಾದ ತಕ್ಷಣ 26ನೇ ಡಿಪೋದ ಚಾಲಕ, ನಿರ್ವಾಹಕರು ಮತ್ತು ಕಿರಣ್ ವಾಹನದ ನಿರ್ವಾಹಕರು, ಸಾರ್ವಜನಿಕರ ಸಹಾಯದಿಂದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೃತರು ಪತ್ನಿ ಮತ್ತು 2ವರ್ಷ 9ತಿಂಗಳ ಪುತ್ರಿಯನ್ನು ಅಗಲಿದ್ದಾರೆ.
ಸಂತಾಪ: ಚಾಲಕ ಹೃದಯಾಘಾತದಿಂದ ನಿಧನರಾದ ವಿಷಯ ಕೇಳಿದ ಸಾರಿಗೆ ಸಚಿವರು ಚಾಲಕ ಕಿರಣ್ ಕುಮಾರ್ ಅವರ ಆತ್ಮಕ್ಕೆ ಶಾಂತಿಕೋರಿದ್ದು, ಮೃತರ ಕುಟುಂಬದವರಿಗೆ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಕರುಣಿಸಲಿ ಎಂದು ಭಗವಂತಲ್ಲಿ ಪ್ರಾರ್ಥಿಸಿದ್ದಾರೆ.
ಅಲ್ಲದೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್, ಸಿಟಿಎಂ, ಡಿಟಿಒ ಸೇರಿದಂತೆ ಎಲ್ಲ ಅಧಿಕಾರಿಗಳು/ಸಿಬ್ಬಂದಿಗಳು ಮೃತರ ಆತ್ಮಕ್ಕೆ ಶಾಂತಿಕೋರಿದ್ದಾರೆ.
ಇನ್ನು ನಾಳೆ ನ.7ರಂದು ಮಧ್ಯಾಹ್ನದ ವೇಳೆ ಹಾಸನ ಜಿಲ್ಲೆಯ ಗದೇನಹಳ್ಳಿ ಅವರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೇ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಭಾರಿ ನೋವಿನ ಸಂಗತಿ: ಚಾಲನಾ ಸಿಬ್ಬಂದಿಗಳು ಒತ್ತಡ ಮತ್ತು ಬಿಡುವಿಲ್ಲದ ರೀತಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಈ ರೀತಿ ಹೃದಯಾಘಾತದಂತಹ ದುರಂತಕ್ಕೆ ಬಲಿಯಾಗುತ್ತಿದ್ದಾರೆ. ಇನ್ನು ನಿಗಮದ ಸಮಸ್ತ ಸಧಿಕಾರಿಗಳು ನೌಕರರು ಕೂಡ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಇವರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ ನೀಡುವಲ್ಲಿ ಮಾತ್ರ ಇನ್ನು ಮೀನಮೇಷ ಎಣಿಸುತ್ತಿದೆ. ಇದು ಭಾರಿ ನೋವಿನ ಸಂಗತಿ.