ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ ಕೆಲಸದಲ್ಲಿರುವ 2086 ಮಂದಿ ನೌಕರರು ಕಳ್ಳ ಮಾರ್ಗದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವುದು ಗೊತ್ತಾಗಿದೆ.
ಇಂಥ ಭ್ರಷ್ಟರಿಂದ ನ್ಯಾಯಯುತವಾಗಿ ಸಿಗಬೇಕಿರುವ ಬಿಪಿಎಲ್ ಕಾರ್ಡ್ಗಳು ಸಿಗದೆ ಸಾವಿರಾರು ಮಂದಿ ಬಡ ಕುಟುಂಬಗಳು ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿವೆ.
ಆದರೂ ಲಂಚ ಕೊಡದ ಹೊರತು ಈ ಬಡ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ಗಳು ಸಿಗುವುದಿಲ್ಲ.ಆದರೆ ಭ್ರಷ್ಟ ಸರ್ಕಾರಿ ನೌಕರರಿಗೆ ಯಾವುದೋ ಒಂದು ದಾಖಲೆಯ ಆಧಾರದ ಮೇಲೆ ಬಿಪಿಎಲ್ ಕಾರ್ಡ್ ಮಾಡಿಕೊಡಲಾಗುತ್ತಿದೆ ಎಂದರೆ ನಮ್ಮ ಸರ್ಕಾರಿ ನೌಕರಿಯಲ್ಲಿರುವ ಭ್ರಷ್ಟರಿಗೆ ಯಾವುದೇ ಕಾನೂನಿನಡಿ ಶಿಕ್ಷೆಯಾಗುತ್ತಿಲ್ಲ ಎಂದರೆ ಏನು ಅರ್ಥ?
ನೋಡಿ ರಾಜ್ಯದ 31 ಜಿಲ್ಲೆಗಳ ಪೈಕಿ 21 ಜಿಲ್ಲೆಗಳಲ್ಲಿ ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿದ್ದ ಅಂಕಿ-ಸಂಖ್ಯೆಗಳು ಲಭ್ಯವಾಗಿವೆ. 31 ಜಿಲ್ಲೆಗಳ ಪೈಕಿ 21 ಜಿಲ್ಲೆಗಳಲ್ಲಿ 2086 ನೌಕರರು ಬಿಪಿಎಲ್ ಕಾರ್ಡ್ ಹೊಂದಿರುವುದು ಬಯಲಾಗಿದೆ. ಆದರೆ ಅವುಗಳನ್ನು ರದ್ದು ಪಡಿಸಿರುವುದು ಬಿಟ್ಟರೆ ಯಾವುದೇ ರೀತಿಯ ಶಿಕ್ಷೆ ಆಗಿಲ್ಲ. ಇದು ದುರಂತ.
2086ರ ಪೈಕಿ ಅತಿ ಹೆಚ್ಚು ಕಲಬುರಗಿ ಜಿಲ್ಲೆಯಲ್ಲಿ 360, ಉಡುಪಿಯಲ್ಲಿ (Udupi) ಅತೀ ಕಡಿಮೆ 13 ಮಂದಿ ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿದ್ದರು. ಈ ಎಲ್ಲ ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲಾಗಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು?: ಕಲಬುರಗಿ – 360, ಬಾಗಲಕೋಟೆ – 196, ದಕ್ಷಿಣ ಕನ್ನಡ – 189, ವಿಜಯಪುರ – 171, ಬಳ್ಳಾರಿ – 168, ಬೀದರ್ – 146, ಹಾಸನ – 102, ಹಾವೇರಿ – 100, ರಾಯಚೂರು- 96, ಚಾಮರಾಜನಗರ – 93, ರಾಮನಗರ – 93.
ಕೋಲಾರ – 80, ಧಾರವಾಡ – 48, ಉತ್ತರ ಕನ್ನಡ – 45, ಮಂಡ್ಯ – 36, ದಾವಣಗೆರೆ 34, ಚಿತ್ರದುರ್ಗ – 32, ಚಿಕ್ಕಬಳ್ಳಾಪುರ – 31, ಕೊಡಗು – 27, ಚಿಕ್ಕಮಗಳೂರು – 17, ಉಡುಪಿ – 13.