ಮೈಸೂರು: ಸಾಲದ ಒಂದು ಕಂತು ಕಟ್ಟಿಲ್ಲ ಎಂದು ಬ್ಯಾಂಕ್‌ನ ಸಿಬ್ಬಂದಿ ರೈತನ ಟ್ರ್ಯಾಕ್ಟರ್ ಜಪ್ತಿ ಮಾಡಿರುವುದನ್ನು ಖಂಡಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಬ್ಯಾಂಕಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದಾರೆ.
ಇಂದು ಬ್ಯಾಂಕ್ ಮುತ್ತಿಗೆ ಹಾಕಿದ ರೈತರು, ಬ್ಯಾಂಕ್ ಸಿಬ್ಬಂದಿಗಳ ನಡೆಯನ್ನು ಖಂಡಿಸಿದರು. ಅಂದರೆ, ರೈತನಿಗೆ ಟ್ರ್ಯಾಕ್ಟರ್ ತೆಗೆದುಕೊಳ್ಳಲು ಸಾಲ ಕೊಟ್ಟಿದ್ದ ಹಾಗೂ ಸಾಲ ಕಟ್ಟದಿದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾಡಿದ್ದ ಮೈಸೂರಿನ ಸರಸ್ವತಿಪುರಂ ನಲ್ಲಿರುವ ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರು ಮುತ್ತಿಗೆ ಹಾಕಿ ರೈತನ ವಿರುದ್ಧ ತೆಗೆದುಕೊಂಡ ಕ್ರಮವನ್ನು ವಿರೋಧಿಸಿದರು.
ಇನ್ನು ಬ್ಯಾಂಕಿನ ಮುಂದೆ ಟ್ರ್ಯಾಕ್ಟರ್ ಖರೀದಿಸಿದ ರೈತ ಮಹದೇವಯ್ಯ ಹಾಗೂ ಆತನ ಕುಟುಂಬಸ್ಥರ ಕಣ್ಣೀರು ಹಾಕುತ್ತಿದ್ದು, ನಮಗೆ ಟ್ರ್ಯಾಕ್ಟರ್ ವಾಪಸ್ ಕೊಟ್ಟುಬಿಡಿ ಒಂದು ತಿಂಗಳ ಕಂತು ತಡವಾಗಿದ್ದಕ್ಕೆ ಇಂತಹ ಕ್ರಮ ಸರಿಯಲ್ಲ. ಬೆಳೆ ಕಟಾವಿಗೆ ಬಂದಿರುವ ಸಮಯದಲ್ಲಿ ಟ್ರ್ಯಾಕ್ಟರ್ ದುಡಿಮೆಗೆ ಸಾಕಷ್ಟು ಅವಕಾಶಗಳಿದ್ದು, ಈಗಾಗಲೇ ಕೆಲವು ರೈತರಿಂದ ಕೆಲಸಕ್ಕೆ ಬರುವುದಾಗಿ ಹೇಳಿ ಮುಂಗಡ ಹಣವನ್ನು ಪಡೆದುಕೊಳ್ಳಲಾಗಿದೆ. ಹೀಗಾಗಿ, ನಮಗೆ ಟ್ರ್ಯಾಕ್ಟರ್ ವಾಪಸ್ ಕೊಟ್ಟುಬಿಡಿ ಎಂದು ಬ್ಯಾಂಕ್ ಸಿಬ್ಬಂದಿ ಮುಂದೆ ಅಳಲು ತೋಡಿಕೊಂಡಿದ್ದಾರೆ.
ನಂಜನಗೂಡು ತಾಲೂಕು ಬಿಳುಗಲಿ ಗ್ರಾಮದ ರೈತ ಮಾದೇವಯ್ಯ 2019ರಲ್ಲಿ ಹೊಸ ಟ್ರ್ಯಾಕ್ಟರ್ ಖರೀದಿ ಮಾಡಿದ್ದರು. ಕಳೆದ ನಾಲ್ಕು ವರ್ಷಗಳಿಂದ ಆರು ತಿಂಗಳಿಗೊಮ್ಮೆ 93,000 ರೂ.ಗಳಂತೆ 7 ಕಂತುಗಳನ್ನು ಪ್ರತಿ ಆರು ತಿಂಗಳಿಗೊಮ್ಮೆ ಕಟ್ಟಿಕೊಂಡು ಬಂದಿದ್ದಾರೆ.
ಆದರೆ, ಒಂದು ಕಂತು ಕಟ್ಟದಿದ್ದಕ್ಕೆ ಅನಾವಶ್ಯಕವಾಗಿ ಟ್ರ್ಯಾಕ್ಟರ್ ಅನ್ನು ಸೀಜ್ ಮಾಡಿ ಅಕ್ರಮವಾಗಿ ಮಾರಾಟ ಮಾಡಿ ರೈತನಿಗೆ ವಂಚಿಸಿದ ಕಾರಣ ರೈತ ಕಟ್ಟಬೇಕಾಗಿದ್ದ ಕಂತಿನ ಹಣವನ್ನು ತನ್ನ ಹೆಂಡತಿಯ ಮಾಂಗಲ್ಯ ಸರವನ್ನು ಅಡವಿಟ್ಟು ಹಾಗೂ ಕೈ ಸಾಲ ಮಾಡಿ ಹೊಂದಿಸಿಕೊಂಡು ನ್ಯಾಯ ಒದಗಿಸಿ ಕೊಡಬೇಕೆಂದು ಮಧ್ಯವರ್ತಿಗಳ ಮೂಲಕ ಬ್ಯಾಂಕಿಗೆ ಭೇಟಿ ಕೊಟ್ಟಾಗ ಬ್ಯಾಂಕಿನ ಮ್ಯಾನೇಜರ್ ಹರೀಶ್ ಎಂಬವರು ಈಗಾಗಲೇ ಟ್ರ್ಯಾಕ್ಟರ್ ಹರಾಜು ಮಾಡಲಾಗಿದೆ ಟ್ರಾಕ್ಟರ್ ವಾಪಸ್ ಕೊಡಲಾಗುವುದಿಲ್ಲ.
ಅದರ ಬದಲಿಗೆ 5 ಲಕ್ಷ ಹಣವನ್ನು ವಾಪಸ್ ಕೊಡುತ್ತೇವೆ ಎಂದು ಒಪ್ಪಿಕೊಂಡಿದ್ದಾರೆ. ಅದನ್ನು ಒಂದು ತಿಂಗಳಾದರೂ ಕೊಡದೆ ಇದ್ದಾಗ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರನ್ನು ಭೇಟಿ ಮಾಡಿ ಬ್ಯಾಂಕಿನವರು ವಂಚನೆ ಮಾಡಿರುವ ಬಗ್ಗೆ ತಿಳಿಸಿ ನಮಗೆ ನ್ಯಾಯ ಒದಗಿಸಿ ಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಹೀಗಾಗಿ ನಿನ್ನೆ ಮೈಸೂರಿನಲ್ಲಿ ನಡೆದ ರೈತರ ಸಭೆಯಲ್ಲಿ ಚರ್ಚಿಸಿ ಜಿಲ್ಲೆಯ ಪದಾಧಿಕಾರಿಗಳಿಗೆ ಕುರುಬೂರು ಶಾಂತಕುಮಾರ್ ಅವರು ಈ ರೈತರ ಸಮಸ್ಯೆಯನ್ನು ಬಗೆಹರಿಸಬೇಕೆಂದು ಸೂಚಿಸಿದ ಕಾರಣ ಸರಸ್ವತಿಪುರಂನಲ್ಲಿರುವ ಕೋಟಕ್ ಮಹೇಂದ್ರ ಬ್ಯಾಂಕಿನ ಮುಂದೆ ಜಮಾಯಿಸಿ ಬ್ಯಾಂಕಿನ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ರೈತರ ರಕ್ತವನ್ನು ಹೀರುತ್ತಿರುವ ಬ್ಯಾಂಕಿಗೆ ಧಿಕ್ಕಾರ ಕೋಟಕ್ ಮಹೇಂದ್ರ ಅಲ್ಲ ಇದು ಗೊಟಕ್ ಮಹೇಂದ್ರ ಫೈನಾನ್ಸ್ ಗೆ ಧಿಕ್ಕಾರ.
ರೈತರ ಟ್ಯಾಕ್ಟರ್ ಅನ್ನು ಅಕ್ರಮವಾಗಿ ಮಾರಾಟ ಮಾಡಿರುವ ಸಿಬ್ಬಂದಿಗೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗುತ್ತಾ ಬ್ಯಾಂಕಿನಲ್ಲಿದ್ದ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಮ್ಯಾನೇಜರ್ ಹೊರಗಡೆ ಹೋಗಿದ್ದಾರೆ ನಾಳೆ ಬನ್ನಿ ಎಂದು ಹೇಳಿದಾಗ ಉದ್ರಿಕ್ತ ಗೊಂಡ ರೈತರು ಎಲ್ಲೇ ಇದ್ದರೂ ಇಲ್ಲಿಗೆ ಬರಲು ಹೇಳಿ ಅವರು ಬರುವವರೆಗೂ ಇಲ್ಲೇ ಇರುತ್ತೇವೆ ನೀವು ಕೂಡ ಎಲ್ಲೂ ಹೋಗ ಬಾರದು ಇಲ್ಲೇ ಇರಬೇಕೆಂದು ಬಾಗಿಲು ಮುಚ್ಚಿಕೊಂಡು ಪ್ರತಿಭಟನೆ ಮುಂದುವರಿಸಿದಾಗ ಸ್ಥಳಕ್ಕೆ ಬಂದ ಸರಸ್ವತಿಪುರಂ ಪೊಲೀಸರು ರೈತರ ನೀಡಿದ ದೂರಿನ ಮೇರೆಗೆ ಸಿಬ್ಬಂದಿ ಮೂಲಕ ಮ್ಯಾನೇಜರ್ ಹರೀಶ್ ಬರಲು ತಿಳಿಸಿದರು.
ಸಂಜೆ 7 ಗಂಟೆಗೆ ಬಂದ ಮ್ಯಾನೇಜರ್‌ಗೆ ಪ್ರತಿಭಟನೆ ಇನ್ನು ಕಂತಿನ ಅವಧಿ ಮೀರಿದ ನಂತರ ರೈತನ ಕುಟುಂಬಸ್ಥರು ಹಣ ಕಟ್ಟಲು ಬಂದರೂ ಅದನ್ನು ಪಾವತಿಸಿಕೊಳ್ಳದೇ ಟ್ರ್ಯಾಕ್ಟರ್ ಜಪ್ತಿ ಮಾಡಿ ಮಾರಾಟ ಮಾಡಿದ್ದಾರೆ. ಇನ್ನು ರೈತ ಮಹದೇವಯ್ಯ ನಾವು ಹಣ ಕಟ್ಟುತ್ತೇವೆ ಟ್ರ್ಯಾಕ್ಟರ್ ಕೊಡಿ ಎಂದರೂ ಅವರಿಂದ ಬ್ಯಾಂಕ್ ಸಿಬ್ಬಂದಿ ಹಣ ಕಟ್ಟಿಸಿಕೊಳ್ಳದೇ ನಿಮ್ಮ ಟ್ರಾಕ್ಟರ್ ಅನ್ನು ಮಾರಾಟ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ರೈತ ಮಹದೇವಯ್ಯನೊಂದಿಗೆ ವರುಣ ಕ್ಷೇತ್ರದ ಹಲವು ರೈತರು ಸೇರಿಕೊಂಡು ಟ್ರ್ಯಾಕ್ಟರ್ ಜಪ್ತಿ ಮಾಡಿದ ಕೋಟಕ್ ಮಹಿಂದ್ರ ಬ್ಯಾಂಕ್‌ಗೆ ಮುತ್ತಿಗೆ ಹಾಕಲಾಗಿದ್ದು, ಇದೀಗ ಬ್ಯಾಂಕಿನವರು ಕೇವಲ ಒಂದು ತಿಂಗಳ ಕಂತಿನ ಹಣವನ್ನ ಕಟ್ಟಿಸಿಕೊಳ್ಳಬೇಕು. ಜೊತೆಗೆ, ಜಪ್ತಿ ಮಾಡಿರುವ ಟ್ರಾಕ್ಟರ್ ಅನ್ನ ಕೂಡಲೇ ವಾಪಾಸ್ ನೀಡಬೇಕು ಎಂದು ಪ್ರತಿಭಟನಾ ನಿರತ ರೈತರು ಆಗ್ರಹಿಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಜಿಲ್ಲಾ ಉಪಾಧ್ಯಕ್ಷ ಮಾರ್ಬಳ್ಳಿ ನೀಲಕಂಠಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಕಿರಗನೂರು ಶಂಕರ್, ಕುರುಬೂರು ಪ್ರದೀಪ್, ಕೆ ಜಿ ಗುರುಸ್ವಾಮಿ, ಗೌರಿ ಶಂಕರ್, ಕೋಟೆ ಸುನಿಲ್, ನಂಜನಗೂಡು ಶಿವಶಂಕರ,ಅಂಬಳೆ ಮಂಜುನಾಥ್, ಬನ್ನೂರು ಸೂರಿ, ಕಿರಗಸೂರು ಪ್ರಸಾದ್ ನಾಯ್ಕ , ತಗಡೂರು ಮಹದೇವಸ್ವಾಮಿ, ಪಿ ರಾಜು, ಉಮೇಶ ಇನ್ನು ಮುಂತಾದವರು ಇದ್ದರು.