ಎಟಿಎಂಗೆ ಹಣ ತುಂಬಲು ಬಂದ ಎಸ್ಬಿಐ ಸಿಬ್ಬಂದಿ ಮೇಲೆ ಖದೀಮರಿಂದ ಗುಂಡಿನ ದಾಳಿ- ಓರ್ವ ಸಾವು, ₹93 ಲಕ್ಷ ದೋಚಿ ಪರಾರಿ
ಬೀದರ್: ಎಟಿಎಂಗೆ ಹಣ ತುಂಬಲು ಬಂದ ವೇಳೆ ಎಸ್ಬಿಐ ಬ್ಯಾಂಕ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ, ಓರ್ವ ಸಿಬ್ಬಂದಿಯ ಹತ್ಯೆಮಾಡಿ, 93 ಲಕ್ಷ ರೂ. ದೋಚಿ ಪರಾರಿಯಾದ ಘಟನೆ ಬೀದರ್ನ ಮುಖ್ಯ ಎಸ್ಬಿಐ ಕಚೇರಿ ಮುಂದೆ ನಡೆದಿದೆ.
ಗುಂಡಿನ ದಾಳಿಯಲ್ಲಿ ಎಟಿಎಂಗೆ ಹಣ ತುಂಬಲು ಬಂದಿದ್ದ ಓರ್ವ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮತ್ತೋರ್ವ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ದುಷ್ಕರ್ಮಿಗಳು, ಬ್ಯಾಂಕ್ ಹಾಗೂ ಎಟಿಎಂಗೆ ಹಣ ಹಾಕುವ ಪಿಎಸ್ಸಿ ವಾಹನದ ಮೇಲೆ ದಾಳಿ ಮಾಡಿ, ಕಣ್ಣಿಗೆ ಖಾರದ ಪುಡಿ ಎರಚಿ, ಗುಂಡಿನ ದಾಳಿ ನಡೆಸಿದ್ದಾರೆ. ಬಳಿಕ ಹಣ ದೋಚಿ ಪರಾರಿಯಾಗಿದ್ದಾರೆ.
ಹಾಡಹಗಲೇ ಎಟಿಎಂಗೆ ಹಣ ಹಾಕಲು ಬಂದ ಸಿಬ್ಬಂದಿಗೆ ಗುಂಡು ಹಾರಿಸಿರೋ ಘಟನೆಯಿಂದ ಅಕ್ಕಪಕ್ಕದ ನಿವಾಸಿಗಳು ಮಳಿಗೆಗಳ ಮಾಲೀಕರು ಭಯಭೀತರಾಗಿದ್ದಾರೆ.
ಇನ್ನೇನು ಎಟಿಎಂಗೆ ಹಣ ಹಾಕಬೇಕು ಅನ್ನುವಷ್ಟರಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಐದು ಸುತ್ತಿನ ಗುಂಡಿನ ದಾಳಿ ನಡೆಸಿದ್ದು, ಭಾರಿ ಭಯದ ವಾತಾವರಣವನ್ನು ಸೃಷ್ಟಿಸಿತು.
ಇನ್ನು ಮುಸುಕುಧಾರಿಗಳು ಖರೀಮರು ಹಣದ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗುತ್ತಿರೋ ದೃಶ್ಯ ಸ್ಥಳೀಯರ ಫೋನ್ನಲ್ಲಿ ಸೆರೆಯಾಗಿದೆ. ಈ ವಿಚಾರ ತಿಳಿದು ಸ್ಥಳಕ್ಕೆ ಎಸ್ಪಿ ಪ್ರದೀಪ್ ಗುಂಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.