ಬೆಂಗಳೂರು: ಆಸ್ತಿ ತೆರಿಗೆ ಬಾಕಿ ವಸೂಲಿ ಮಾಡಲು ಬಿಬಿಎಂಪಿಯು ದೀರ್ಘಕಾಲದಿಂದ ಆಸ್ತಿ ತೆರಿಗೆಯನ್ನು ಪಾವತಿ ಮಾಡದ ಸುಸ್ತಿದಾರರ ಸ್ಥಿರ ಆಸ್ತಿಗಳನ್ನು ತುರ್ತು ಮಾರಾಟ ಮಾಡಲು ಹರಾಜ ಪ್ರಕ್ರಿಯೆಯನ್ನು ಆರಂಭಿಸುತ್ತಿದೆ ಎಂದು ಬಿಬಿಎಂಪಿಯ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.
ಕೆಲ ಆಸ್ತಿ ಮಾಲೀಕರು ಕೆಳಗಿನ ಹಂತಗಳ ಪ್ರಕ್ರಿಯೆಯ ಹೊರತಾಗಿಯೂ ಬಾಕಿ ಆಸ್ತಿತೆರಿಗೆಯನ್ನು ಪಾವತಿಸಿಲ್ಲ, ಆದುದರಿಂದ ಈ ಹರಾಜು ಪ್ರಕ್ರಿಯೆಯನ್ನು ಬಿಬಿಎಂಪಿ ಕಾಯ್ದೆ 2020ರ ಸೆಕ್ಷನ್ 156 ಉಪಪ್ರಕರಣ 5ರ ಅಡಿಯಲ್ಲಿ ಮಾಡಲಾಗುತ್ತಿದೆ.
(1) ಕಾರಣ ತೋರಿಸು ಸೂಚನೆ
(2) ಬೇಡಿಕೆ ನೋಟಿಸ್
(3) ಆಸ್ತಿಗಳ ಮುಟ್ಟುಗೋಲು
(4) ವಸತಿಯೇತರ ಆಸ್ತಿಗಳ ಸಂದರ್ಭದಲ್ಲಿ ಬೀಗಮುದ್ರೆ ಹಾಕುವುದು ಎಲ್ಲದಕ್ಕೂ ಸ್ಪಂದಿಸದಿರುವುದರಿಂದ ಕೊನೆಯ ಹಂತವಾಗಿ ಆಸ್ತಿ ತೆರಿಗೆ ವಸೂಲಾತಿಗಾಗಿ ಈ ಆಸ್ತಿಗಳನ್ನು ಹರಾಜಿಗೆ ಇಡಲಾಗುತ್ತಿದೆ.
ಹರಾಜಿನಲ್ಲಿ ಸ್ವೀಕರಿಸಿದ ಯಾವುದೇ ಹೆಚ್ಚುವರಿ ಹಣವನ್ನು ಪಾಲಿಕೆಗೆ ಸಂದಾಯವಾಗಬೇಕಿರುವ ಪೂರ್ಣ ಬಾಕಿ ವಸೂಲಿ ಮಾಡಿದ ನಂತರ ಮಾಲೀಕರ ಬ್ಯಾಂಕ್ ಖಾತೆಗೆ ಜಮೆಮಾಡಲಾಗುವುದು ಎಂದು ವಿವರಿಸಿದ್ದಾರೆ.
ಇನ್ನು ಪಾಲಿಕೆಯಲ್ಲಿನ 8-10 ಪ್ರಮುಖ ಸುಸ್ತಿದಾರರುಗಳನ್ನು ಪ್ರತಿ ವಲಯದಿಂದ ಸುಮಾರು 1-2 ಸುಸ್ತಿದಾರರುಗಳನ್ನು ಗುರುತಿಸಲಾಗಿದೆ ಮತ್ತು ಸ್ಥಿರ ಆಸ್ತಿಗಳ ಮಾರಾಟದ ಹರಾಜು ಮಾರಾಟ ದಿನಾಂಕವನ್ನು ನಿಗದಿಪಡಿಸುವ ನೋಟಿಸ್‌ಗಳನ್ನು ನೀಡಲಾಗಿದೆ, ಅವು ದೀರ್ಘಕಾಲದ ಆಸ್ತಿ ತೆರಿಗೆಯನ್ನು ಪಾವತಿ ಮಾಡದ ಪ್ರಕರಣಗಳಾಗಿವೆ.
ಇದು ಒಂದು ಆರಂಭವಾಗಿದ್ದು, ಪ್ರತಿ ವಾರ ಹೆಚ್ಚು ಹೆಚ್ಚು ಆಸ್ತಿಗಳನ್ನು (ಹೆಚ್ಚು ಬಾಕಿ ಉಳಿದಿರುವ) – ವಾಣಿಜ್ಯ/ಕೈಗಾರಿಕಾ ಮತ್ತು ವಸತಿ ಎರಡೂ ಸೇರಿದಂತೆ- ಆಸ್ತಿ ತೆರಿಗೆ ಬಾಕಿಗಳನ್ನು ವಸೂಲಿ ಮಾಡಲು ಹರಾಜಿಗೆ ಇಡಲಾಗುತ್ತದೆ.
ಮುಂದಿನ ವಾರ ಹೆಚ್ಚಿನ ಆಸ್ತಿಗಳನ್ನು ಹರಾಜು ಮಾರಾಟಕ್ಕೆ ಯೋಜಿಸಲಾಗಿದೆ. ತೆರಿಗೆ ಬಾಕಿಗಳನ್ನು ಪಾವತಿಸದ ಸುಮಾರು 2 ಲಕ್ಷ ಆಸ್ತಿಗಳಿವೆ ಮತ್ತು ಬಿಬಿಎಂಪಿಯಿಂದ ಇದೇ ರೀತಿಯ ಬಲವಂತದ ವಸೂಲಾತಿ ಕ್ರಮವನ್ನು ತಪ್ಪಿಸಲು ತಕ್ಷಣವೇ ತಮ್ಮ ಆಸ್ತಿ ತೆರಿಗೆ ಬಾಕಿಗಳನ್ನು ಪಾವತಿ ಎಂದು ತಿಳಿಸಿದ್ದಾರೆ.