ಚಿತ್ರದುರ್ಗ: ರಾಜ್ಯ ಸರ್ಕಾರಿ ನೌಕರರಿಗೆ ಈಗಾಲೇ ಏಳನೇ ವೇತನ ಆಯೋಗ ಜಾರಿಗೊಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025 ರಲ್ಲಿ ಒಪಿಎಸ್, 2026ಕ್ಕೆ ಕೇಂದ್ರ ಮಾದರಿ ವೇತನ ಜಾರಿಗೊಳಿಸಲಿದ್ದಾರೆ ಎಂಬ ಭರವಸೆಯಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಹೇಳಿದ್ದಾರೆ.
ಹೊಸದುರ್ಗ ತಾಲೂಕು ಸರ್ಕಾರಿ ನೌಕರರ ಸಂಘದ ಹಮ್ಮಿಕೊಂಡಿದ್ದ ವ್ಯಕ್ತಿತ್ವ ವಿಕಸನ ಕಾರ್ಯಾಗಾರವನ್ನು ಉದ್ಘಾಟಿಸಿದ ಬಳಿಕ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಸಿಎಂ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜತೆಗೆ ಸರ್ಕಾರಿ ನೌಕರರ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. ಅದರಂತೆ ಮುಂದಿನ ದಿನಗಳಲ್ಲಿ ಸರ್ಕಾರ ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಜಾರಿಗೊಳಿಸುವ ಮೂಲಕ ಸರ್ಕಾರಿ ನೌಕರರ ಹಿತ ಕಾಯಬೇಕು. ಈ ನಿಟ್ಟಿನಲ್ಲಿ ಸಂಘವು ಮನವಿ ಮಾಡುತ್ತಲೇ ಬರುತ್ತಿದೆ ಎಂದರು.
ಇನ್ನು ಈ ಹಿಂದಿನಿಂದಲೂ ನಮ್ಮ ಪ್ರಮುಖ ಬೇಡಿಕೆಗಳಲ್ಲಿ ಒಂದಾದ ರಾಜ್ಯ ಸರ್ಕಾರಿ ನೌಕರರಿಗೂ ಕೇಂದ್ರ ಮಾದರಿ ವೇತನ ಜಾರಿಗೊಳಿಸಬೇಕು ಎಂಬ ಕೂಗಿಗೂ ಸಿಎಂ ಸ್ಪಂದಿಸಲಿದ್ದು, ಇದನ್ನು 2026ಕ್ಕೆ ಜಾರಿ ಮಾಡುವರು ಎಂಬ ನಂಬಿಕೆ ಇದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಇನ್ನು ತಹಸೀಲ್ದಾರ್ ತಿರುಪತಿ ಪಾಟೀಲ್ ಮಾತನಾಡಿ ಪ್ರತಿಯೊಬ್ಬ ನೌಕರರು ಆತ್ಮಸಾಕ್ಷಿಗೆ ಓಗೊಟ್ಟು ಕಾರ್ಯನಿರ್ವಹಿಸಬೇಕು. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಸರ್ಕಾರದ ಯೋಜನೆಗಳನ್ನು ಭಾರಿ ಪ್ರಾಮಾಣಿಕತೆಯಿಂದ ಅನುಷ್ಠಾನಗೊಳಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಆರ್.ಶಾಂತಕುಮಾರ್ ಮಾತನಾಡಿ, ಸಂಘದ ಸಭಾಂಗಣ ನಿರ್ಮಾಣಕ್ಕೆ 50 ಲಕ್ಷ ರೂ. ಅನುದಾನವನ್ನು ರಾಜ್ಯಾಧ್ಯಕ್ಷರು ಕೊಡಿಸಬೇಕು ಎಂದು ಮನವಿ ಮಾಡಿದರು.
ಲೇಖಕ ನಾಗರಾಜ್ ರಾವ್, ಕಲ್ಕಟ್ಟೆ ಕವಿ, ಯಗಟಿ ಸತೀಶ್, ಕಾಂಗ್ರೆಸ್ ಮುಖಂಡ ಅರುಣ್ ಗೋವಿಂದಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಕ್ಕೆ ಮತ್ತಿತರರು ಇದ್ದರು.