ಬೆಂಗಳೂರು: ರಾಜ್ಯದ ಶಕ್ತಿಸೌಧ ವಿಧಾನಸೌಧವನ್ನು ಒಮ್ಮೆಯಾದರೂ ನೋಡಬೇಕು ಎಂದು ರಾಜ್ಯದ ಅದೆಷ್ಟು ಮಂದಿ ಆಸೆಪಡುತ್ತಿದ್ದರು. ಅಲ್ಲಿಗೆ ನಾವು ಹೋಗುವುದು ಹೇಗೆ ಎಂದು ಹಲವರು ಹಳ್ಳಿಗಳ್ಳಲಿ ಮಾತನಾಡಿಕೊಳ್ಳುತ್ತಿದ್ದರು. ಅದಕ್ಕೆ ಈಗ ಸಮಯ ಕೂಡಿ ಬಂದಿದೆ ಅಂದರೆ ಇಂದಿನಿಂದ ಸಾರ್ವಜನಿಕ ವೀಕ್ಷಣೆಗೆ ವಿಧಾನಸೌಧ ಮುಕ್ತವಾಗಿದೆ.
ಹೀಗಾಗಿ ಶಕ್ತಿಸೌಧವನ್ನು ದೂರದಿಂದಲೇ ನೋಡಿ.. ಫೋಟೋ ಕ್ಲಿಕ್ಕಿಸಿ ಸಂತಸಪಟ್ಟುಕೊಳ್ಳುತ್ತಿದ್ದ ಮಂದಿಗೆ ಹತ್ತಿರದಿಂದಲೇ ನೋಡುವ ಅವಕಾಶ ಸಿಕ್ಕಿದೆ. ಭವ್ಯ ವಿಧಾನಸೌಧ ವೀಕ್ಷಣೆಗೆ ರಾಜ್ಯ ಸರ್ಕಾರ ʻಗೈಡೆಡ್ ಟೂರ್ʼ ಹೆಸರಿನಲ್ಲಿ ಪ್ರವಾಸ ಭಾಗ್ಯ ಕಲ್ಪಿಸಿದೆ. ನಿತ್ಯ 25 ರಿಂದ 30 ಸದಸ್ಯರ 10 ಬ್ಯಾಚ್‌ಗಳಿಗೆ ವೀಕ್ಷಣೆಗೆ ಅವಕಾಶ ಇದೆ.
ಇನ್ನು ಇಂದಿನಿಂದ ಗೈಡೆಡ್ ಟೂರ್ ಶುರುವಾಗಿದ್ದು, ಪ್ರವಾಸಿಗರಿಗೆ ವಿಧಾನಸೌಧದ ಮಹತ್ವ, ಇತಿಹಾಸ, ಪರಂಪರೆ, ಅಧಿವೇಶನ ಸಭಾಂಗಣ, ಭವ್ಯ ಮೆಟ್ಟಿಲುಗಳ ವಿವರಣೆ ಕೊಡುವ ಕೆಲಸವನ್ನು ಮಾರ್ಗದರ್ಶಿಗಳು ಮಾಡವವರಿದ್ದಾರೆ. ವಿಧಾನಸೌಧದ ಮಹತ್ವವನ್ನು ಪ್ರವಾಸಿಗರಿಗೆ ತಿಳಿಸಿಕೊಡಲು 10 ಗೈಡ್‌ಗಳನ್ನ ನೇಮಕ ಮಾಡಿಕೊಳ್ಳಲಾಗಿದ್ದು, ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ವಿವರಣೆ ನೀಡಲಿದ್ದಾರೆ.
ಗುರುತಿನ ಚೀಟಿ ಕಡ್ಡಾಯ: ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯ, ಹೊರ ದೇಶಗಳ ಪ್ರವಾಸಿಗರೂ ವಿಧಾನಸೌಧ ವೀಕ್ಷಣೆಗೆ ಬರ್ತಿದ್ದಾರೆ. ವಿಧಾನಸೌಧ ಪ್ರವಾಸಕ್ಕೆ ಪ್ರತಿ ಬ್ಯಾಚ್‌ಗೂ ಒಂದೂವರೆ ಗಂಟೆ ಸಮಯ, ಒಂದೂವರೆ ಕಿಮೀ ನಡಿಗೆ ಇರಲಿದೆ. ವಿಕಾಸಸೌಧದ ಎಂಟ್ರಿ ಗೇಟ್ (ನಂಬರ್ 3) ಮೂಲಕ ಟೂರ್ ಆರಂಭವಾಗಲಿದೆ. 20 ನಿಮಿಷ ಮುಂಚೆ ಟೂರ್ ಆರಂಭಕ್ಕೂ ಮುನ್ನ ಹಾಜರಿರಬೇಕು, ಟಿಕೆಟ್ ಬುಕ್ ಮಾಡಿದವರು ಸರ್ಕಾರ ವಿತರಿಸಿರುವ ಯಾವುದಾದರೂ ಗುರುತಿನ ಚೀಟಿ ತರಬೇಕು. ವಿಧಾನಸೌಧ ಟೂರ್ ವೇಳೆ ನಿಗದಿತ ಸ್ಥಳದಲ್ಲಿ ಮಾತ್ರ ಫೋಟೋ ತೆಗೆಯಲು ಅವಕಾಶ ನೀಡಲಾಗಿದೆ.
ಟಿಕೆಟ್ ದರ ಎಷ್ಟು?: ಪ್ರತೀ ಪ್ರವಾಸಿಗರಿಗೂ ತಲಾ 50 ರೂ. ಟಿಕೆಟ್ ನಿಗದಿ ಮಾಡಲಾಗಿದೆ. ಇನ್ನೂ 15 ವರ್ಷದೊಳಗಿನ ಮಕ್ಕಳು, ಎಸ್‌ಎಸ್‌ಎಲ್‌ಸಿ ವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಇರಲಿದೆ. ಕಳೆದ ವಾರವಷ್ಟೇ ಸ್ಪೀಕರ್ ಯು.ಟಿ.ಖಾದರ್ ಹಾಗೂ ಸಭಾಪತಿ ಹೊರಟ್ಟಿಯವರು ಗೈಡೆಡ್ ಟೂರ್‌ಗೆ ಚಾಲನೆ ನೀಡಿದ್ದರು.
ವಿಧಾನಸೌಧ ಈಗ ಪ್ರವಾಸಿ ತಾಣ: ಬೆಂದಕಾಳೂರಿನ ಹೆಗ್ಗುರುತು, ರಾಜ್ಯದ ಆಡಳಿತ ಶಕ್ತಿಸೌಧ ಅಂತನೇ ಕರೆಯಿಸಿಕೊಳ್ಳುವ ವಿಧಾನಸೌಧ ಈಗ ಪ್ರವಾಸಿ ತಾಣ. ಇಲ್ಲಿಯವರೆಗೂ ಕೇವಲ ಗೇಟ್ ಹೊರಭಾಗದಿಂದ, ರಸ್ತೆಯಿಂದ ಕಾಣಿಸುತ್ತಿದ್ದ ವಿಧಾನಸೌಧ ಇನ್ಮುಂದೆ ಪ್ರವಾಸಿ ಸ್ಥಳ ಆಗಲಿದೆ. ಗೈಡೆಡ್ ಟೂರ್ ಹೆಸರಲ್ಲಿ ಸಾರ್ವಜನಿಕರ ವೀಕ್ಷಣೆಗೆ ಸರ್ಕಾರ ಅವಕಾಶ ನೀಡಿದೆ. ಇನ್ಮುಂದೆ ವಿಧಾನಸೌಧದ ಒಳಗೆ ಹೋಗಿ ಭವ್ಯ ಐತಿಹಾಸಿಕ ಕಟ್ಟಡವನ್ನು ಕಣ್ತುಂಬಿಕೊಳ್ಳಬಹುದು.

ಇನ್ನು ಮತ್ತೇಕೆ ತಡ ಹಳ್ಳಿ ಹಳ್ಳಿಗಳಲ್ಲೇ ಕುಳಿತು ನಾನು ವಿಧಾನಸೌಧ ನೋಡಬೇಕಿತ್ತು ಏನು ಮಾಡುವುದು ಎಂಬ ಚಿಂತೆ ಬಿಟ್ಟು ಈಗ ಸರ್ಕಾರ ಕೊಟ್ಟಿರುವ ಯಾವುದಾದರೊಂದು ಗುರುತಿನ ಚೀಟಿ ಜತೆಗೆ 50 ರೂ. ಹಿಡಿದುಕೊಂಡು ಬಂದರೆ ಸಾಕು. ನೀವು ಶಕ್ತಿಸೌಧದ ಸಂಪೂರ್ಣ ಇತಿಹಾಸ ತಿಳಿದುಕೊಳ್ಳುವ ಜತೆಗೆ ನಾನು ಕೂಡ ವಿಧಾನಸೌಧ ನೋಡಿ ಬಂದಿದ್ದೇನೆ ಎಂದು ಹೆಮ್ಮೆಯಿಂದ ನಿಮ್ಮ ಹಳ್ಳಿಯಲ್ಲಿ ಅಷ್ಟೆ ಏಕೆ ಹೋದಲೆಲ್ಲ ಹೇಳಿಕೊಳ್ಳಬಹುದು.
Related

 










