ವಿಜಯಪುರ: ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸೌಲಭ್ಯ ದೊರೆಯಲು ಅನುಕೂಲವಾಗುವಂತೆ ಮುಳವಾಡ ಹಂತ-3 ಹಾಗೂ ಚಿಮ್ಮಲಗಿ ಏತ ನೀರಾವರಿ ಯೋಜನೆಯಡಿ ಬರುವ ಕೆರೆಗಳಿಗೆ ನೀರು ಬಿಡಲಾಗಿದೆ.
ಕೆರೆಗಳನ್ನು ಪ್ರತಿಶತ 50 ರಷ್ಟು ಸಾಮರ್ಥ್ಯಕ್ಕೆ ಭರ್ತಿ ಮಾಡಲು ಆಲಮಟ್ಟಿ ಜಲಾಶಯದಿಂದ 1.30 ಟಿಎಂಸಿ ನೀರನ್ನು ಇಂದು (ಏ. 20) ಬೆಳಗ್ಗೆ 8 ಗಂಟೆಯಿಂದ ನಾಲ್ಕು ವಾರಗಳವರೆಗೆ ನೀರು ಬಿಡುಗಡೆಗೊಳಿಸಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಆಲಮಟ್ಟಿ ಜಲಾಶಯದಿಂದ ಕೃಷ್ಣಾ ಮೇಲ್ದಂಡೆ ಯೋಜನೆಯ ಮುಳವಾಡ ಹಂತ -3 ಹಾಗೂ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಬರುವ ಕೆರೆಗಳನ್ನು 50% ಸಾಮರ್ಥ್ಯಕ್ಕೆ ಕುಡಿಯುವ ಉದ್ದೇಶಕ್ಕಾಗಿ ತುಂಬಿಸಲಾಗುತ್ತಿದೆ.
ಈ ಯೋಜನೆಯಡಿ ಬರುವ ಗ್ರಾಮಗಳ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಇರುವುದನ್ನು ಅನುಲಕ್ಷಿಸಿ, ನೀರಿನ ಅಗತ್ಯತೆಯನ್ನು ಗಮನದಲ್ಲಿಸಿಕೊಂಡು ಕುಡಿಯುವ ನೀರಿನ ಉದ್ದೇಶಕ್ಕಾಗಿ ಸದ್ಯ ಆಲಮಟ್ಟಿ ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣದಲ್ಲಿ ನೀರು ಪೋಲಾಗದಂತೆ ಮಿತವ್ಯಯವಾಗಿ ಒಟ್ಟು 1.30 ಟಿ.ಎಂ.ಸಿ ನೀರನ್ನು ಬಿಡುಗಡೆಗೊಳಿಸಲಾಗಿದೆ.
ಕುಡಿಯುವ ನೀರನ್ನು ಕೊನೆಯ ಹಂತದವರೆಗೆ ತಲುಪಿಸಲು ಹೆಸ್ಕಾಂ, ಪೊಲೀಸ್, ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯಿತಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ನೀರಾವರಿ ಇಲಾಖೆಯ ಅಧಿಕಾರಿಗಳ ತಂಡಗಳನ್ನು ರಚಿಸಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕಾಲುವೆಗಳಿಗೆ ಬಿಡುಗಡೆ ಮಾಡಲಾಗುವ ನೀರು ಪೋಲಾಗದಂತೆ ಮಿತವ್ಯಯವಾಗಿ ಬಳಸುವ ಹಾಗೂ ಕುಡಿಯುವ ನೀರನ್ನು ಕೃಷಿಗೆ ಬಳಸದಂತೆ ತಡೆಯಲು ಅಗತ್ಯ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ತಿಳಿಸಿದ್ದಾರೆ.