ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ (ಕೆಎಂಎಫ್) ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಬೇಡಿಕೆಗೆ ಮಣಿದಿರುವ ಸಹಕಾರ ಇಲಾಖೆಯು ಏಳನೇ ವೇತನ ಆಯೋಗದ ವರದಿ ಪ್ರಕಾರ ವೇತನ ಹಾಗೂ ಇತರೆ ಸೇವಾ ಸೌಲಭ್ಯಗಳ ಜಾರಿ ಮಾಡುವುದಕ್ಕೆ ಸಮ್ಮತಿಸಿದೆ.
2024ರ ಆ.1ರಿಂದ ಪೂರ್ವಾನ್ವಯವಾಗುವಂತೆ ಕೆಎಂಎಫ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಏಳನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ ಪರಿಷ್ಕೃತ ವೇತನ ಶ್ರೇಣಿ, ತುಟ್ಟಿಭತ್ಯೆ ಹಾಗೂ ಇತರೆ ಭತ್ಯೆಗಳನ್ನು ಮಂಜೂರು ಮಾಡುವಂತೆ ಸಹಕಾರ ಸಂಘಗಳ ನಿಬಂಧಕ (ಆರ್‌ಸಿಎಸ್) ಟಿ.ಎಚ್.ಎಂ. ಕುಮಾರ್ ಆದೇಶ ಹೊರಡಿಸಿದ್ದಾರೆ.
![](https://vijayapatha.in/wp-content/uploads/2025/02/7-Feb-2025-KMF-300x166.jpg)
7ನೇ ವೇತನ ಆಯೋಗದ ಜಾರಿಗೆ ಆಗ್ರಹಿಸಿ ಕೆಎಂಎಫ್ ಮತ್ತು ಅದರ ವ್ಯಾಪ್ತಿಯ 15 ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳ ಅಧಿಕಾರಿಗಳು/ನೌಕರರು ಫೆ.1ರಿಂದ ದೈನಂದಿನ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಮುಂದಾಗಿದ್ದರು. ಬಳಿಕ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ ಅವರು ಮುಖ್ಯಮಂತ್ರಿಗಳು ಹಾಗೂ ಸಹಕಾರ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಫೆ.3ರೊಳಗೆ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು.
ಷರತ್ತು ಬದ್ಧ ಅನುಮತಿ: ನಂತರ ಕೆಎಂಎಫ್ ಮತ್ತು ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮುಷ್ಕರದ ನಿರ್ಧಾರದಿಂದ ಹಿಂದೆ ಸರಿದು ಫೆ.7ರ ಗಡುವು ಕೊಟ್ಟಿದ್ದರು. ಅಂತಿಮವಾಗಿ ಸಹಕಾರ ಸಂಘಗಳ ನಿಬಂಧಕರು, ಬೇಡಿಕೆ ಈಡೇರಿಕೆಗೆ ಕೆಲವು ಷರತ್ತುಗಳೊಂದಿಗೆ ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ.
ಆದರೆ, ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ವೇತನ ಪರಿಷ್ಕರಣೆಗೆ ಯಾವುದೇ ಆದೇಶವಾಗಿಲ್ಲ. ಕೆಎಂಎಫ್‌ನಲ್ಲಿ 1,275 ಉದ್ಯೋಗಿಗಳಿದ್ದು ವೇತನ ಪರಿಷ್ಕರಣೆಯಿಂದ ವಾರ್ಷಿಕ 18.36 ಕೋಟಿ ರೂ. ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ.
ಸಿಬ್ಬಂದಿಗಳ ವಾರ್ಷಿಕ ವೆಚ್ಚವು 173.36 ಕೋಟಿ ರೂ. ಆಗಲಿದ್ದು, ಇದರಿಂದ ಕೆಎಂಎಫ್‌ಗೆ ಆರ್ಥಿಕ ನಷ್ಟವಾಗದಂತೆ ವಹಿವಾಟನ್ನು ಗಣನೀಯವಾಗಿ ಹೆಚ್ಚಿಸಬೇಕು ಮತ್ತು ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕು.
ಇನ್ನು ಹೊರ ಗುತ್ತಿಗೆ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸುವಂತಿಲ್ಲ ಹಾಗೂ ಹಾಲಿ ಹೊರ ಗುತ್ತಿಗೆ ಸಿಬ್ಬಂದಿಯನ್ನು ಕೆಲಸದಲ್ಲಿ ಮುಂದುವರಿಸಲು ಸಹಕಾರ ಇಲಾಖೆಯು ಮೀಸಲಾತಿ ನಿರ್ದೇಶನ ಪಾಲಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.
![](https://vijayapatha.in/wp-content/uploads/2024/02/QR-Code-VP-1-1-300x62.png)