ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದಲ್ಲಿ ನಿಲ್ಲಿಸದೆ ಹೋಗಿದೆ. ಹೀಗಾಗಿ ನನಗೆ ಸರಿಯಾದ ಸಮಯಕ್ಕೆ ತಲುಪಬೇಕಾದ ಸ್ಥಳಕ್ಕೆ ತಲುಪಲು ಸಾಧ್ಯವಾಗಿಲ್ಲ. ಆದ್ದರಿಂದ ಒಂದು ತಿಂಗಳ ಸಂಬಳವನ್ನು ನನಗೆ ನಷ್ಟ ಪರಿಹಾರವಾಗಿ ನೀಡಬೇಕು ಎಂದು ಪ್ರಯಾಣಿಕ ವಕೀಲರೊಬ್ಬರು ಸಂಸ್ಥೆಯ ಎಂಡಿ ಅವರಿಗೆ ಮನವಿ ಮಾಡಿದ್ದಾರೆ.
ಜತೆಗೆ KA 40 F 698 ವಾಹನದ ಚಾಲಕ ಮತ್ತು ನಿರ್ವಾಹಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಕೋರಿರುವ ವಕೀಲ ಎನ್.ನವೀನ್ ಕುಮಾರ್ ಎಂಬುವವರು ತಾವು ಅನುಭವಿಸಿದ ತೊಂದರೆ ಬಗ್ಗೆ ವಿವರಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು 06/02/2025ರಂದು ಚಿಂತಾಮಣಿಗೆ ಹೋಗಲು ಬೆಂಗಳೂರಿನ ಕಾರ್ಪೊರೇಷನ್ ಬಸ್ ನಿಲ್ದಾಣದ ಬಳಿ ತಮ್ಮ ಸಂಸ್ಥೆಯ ವಾಹನಗಳಿಗೆ ಕಾದಿದ್ದು, ಈ ವೇಳೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಡಿಪೋಗೆ ಸೇರಿ ವಾಹನವು ಮಧ್ಯಾಹ್ನ 02:56ಕ್ಕೆ ಸರಿಯಾಗಿ ಬೆಂಗಳೂರಿನ ಕಾರ್ಪೊರೇಷನ್ ನಿಲ್ದಾಣಕ್ಕೆ ಬಂದಿದೆ.
ಈ ಬಸ್ ಕಡ್ಡಾಯ ನಿಲುಗಡೆ ಇರುವುದರಿಂದ ಕಾರ್ಪೊರೇಷನ್ ಬಸ್ ನಿಲ್ದಾಣದಲ್ಲಿ ನಿಲ್ಲಿಸಬೇಕಾಗಿತ್ತು. ಆದರೆ ವಾಹನವು ನಿಲ್ಲಿಸಿಸದೆ ನಿರ್ಲಕ್ಷ್ಯವಾಗಿ ಹೋಗಿದೆ. ಇದರ ಬಗ್ಗೆ ನಾನು KSRTC DTO ಚಿಕ್ಕಬಳ್ಳಾಪುರ ಇವರಿಗೆ ಅದೇ ದಿನ ಮಧ್ಯಾಹ್ನ 03:02ಕ್ಕೆ ದೂರವಾಣಿ ಮೂಲಕ ಸಂಪರ್ಕಿಸಿ ಈ ಸಂಬಧ ದೂರನ್ನು ನೋಂದಾಯಿಸಿದ್ದೇನೆ.
ಅದೇನೇ ಆದರೂ, ಸಂಸ್ಥೆಯ ವಾಹನಗಳು ನಿಗದಿತ ಮತ್ತು ಖಡ್ಡಾಯ ನಿಲುಗಡೆಗಳನ್ನು ನಿರ್ಲಕ್ಷಿಸಿ ಹೋಗುವಂತಿಲ್ಲ. ಆದ್ದರಿಂದ ನಾನು ಈ ವಾಹನದ ಅಲಭ್ಯತೆಯಿಂದ ಸಮಯಕ್ಕೆ ಸರಿಯಾಗಿ ನನ್ನ ಕೆಲಸ ಕಾರ್ಯಗಳಿಗೆ ಹೋಗಲು ಸಾಧ್ಯವಾಗಲಿಲ್ಲ, ಆದ್ದರಿಂದ ಕೆಲ ಸಮಯ ವಾಹನಕ್ಕಾಗಿ ಪರದಾಡುವಂತಾಯಿತು.
ಇನ್ನು ಸಮಯವೆಂಬುದು ಹಣಕ್ಕಿಂತ ಬೆಲೆಯುಳ್ಳದ್ದು ಮತ್ತು ಮಿಗಿಲಾಗಿದ್ದು, ನೌಕರರು ಮಾಡಿದ ನಿರ್ಲಕ್ಷ್ಯತೆಗೆ ಸಂಸ್ಥೆಯೇ ಹೊಣೆ ಹೊತ್ತು, ನನಗಾದ ಮಾನಸಿಕ ಖಿನ್ನತೆಗೆ ಮತ್ತು ಅನಾನುಕೂಲಕ್ಕೆ ಸಂಸ್ಥೆಯು ನಷ್ಟ ಪರಿಹಾರ ನೀಡುವ ಭಾದ್ಯತೆಯಿಂದ ಕೂಡಿದ್ದು, ಈ ವಾಹನದ ಚಾಲಕ ಮತ್ತು ನಿರ್ವಾಹಕರ ಒಂದು ತಿಂಗಳ ಸಂಬಳವನ್ನು ನನಗೆ ನಷ್ಟ ಪರಿಹಾರವಾಗಿ ನೀಡಬೇಕು ಎಂದು ಕೇಳಿದ್ದಾರೆ.
ಇನ್ನು KA 40 F 698 ವಾಹನದ ಚಾಲಕ ಮತ್ತು ನಿರ್ವಾಹಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದು ಕೋರಿದ್ದಾರೆ.