ಬೆಂಗಳೂರು: 100 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ “ಸ್ಮಶಾನಕ್ಕೆಂದು ಮೀಸಲಿಟ್ಟಿರುವ ಸರ್ಕಾರಿ ಸ್ವತ್ತನ್ನು ಪ್ರಭಾವೀ ವ್ಯಕ್ತಿಯೊಬ್ಬರ ಖಾಸಗಿ ಬಡಾವಣೆಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಸರ್ಕಾರಿ ಅಧಿಕಾರಿ ಮತ್ತು ನೌಕರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೊಸದಾಗಿ ನಿರ್ಮಿಸಿರುವ “ಕೆಂಪೇಗೌಡ ಬಡಾವಣೆ”ಗೆ ಹೊಂದಿಕೊಂಡಂತಿರುವ ಬೆಂಗಳೂರು ದಕ್ಷಿಣ ತಾಲೂಕು, ಕೆಂಗೇರಿ ಹೋಬಳಿ, ಸೂಲಿಕೆರೆ ಗ್ರಾಮದ ಸರ್ವೆ ನಂ: 77 (ಹಳೆಯ ಸರ್ವೆ ನಂ: 8) ರ 4 ಎಕರೆ ಸರ್ಕಾರಿ ಗೋಮಾಳ ಜಮೀನನ್ನು ಸೂಲಿಕೆರೆ ಗ್ರಾಮದ “ರುದ್ರಭೂಮಿ”ಗೆಂದು ಮೀಸಲಿಟ್ಟು ಆದೇಶಿಸಲಾಗಿದೆ. ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿಗಳ (ಆದೇಶ ಸಂಖ್ಯೆ – LND (SLR) – 625/2008-09/dt: 12/01/2010) ಆದೇಶದಂತೆ 2010 ರಲ್ಲಿ ಮೀಸಲಿರಿಸಲಾಗಿದೆ.
![](https://vijayapatha.in/wp-content/uploads/2025/02/7-Feb-2025-N-R-Ramesh-300x170.jpg)
ಈ ರೀತಿ “ಸ್ಮಶಾನ”ಕ್ಕೆಂದು ಮೀಸಲಿಟ್ಟಿರುವ 4 ಎಕರೆ ಸ್ವತ್ತನ್ನು ಕೆಂಪೇಗೌಡ ಬಡಾವಣೆಯ ವಿಸ್ತರಣೆಗೆಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಬಿಟ್ಟುಕೊಡುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಮನವಿ ಮಾಡಿತ್ತು. ಆದರೆ “ರುದ್ರಭೂಮಿ”ಗೆಂದು ಮೀಸಲಿಟ್ಟ ಸ್ವತ್ತನ್ನು ಬೇರೆ ಉದ್ದೇಶಗಳಿಗೆ ಬಿಟ್ಟುಕೊಡಲು ಕಾನೂನು ರೀತ್ಯಾ ಅವಕಾಶವಿರುವುದಿಲ್ಲವೆಂಬ ಉತ್ತರವನ್ನು ಜಿಲ್ಲಾಡಳಿತ ನೀಡಿದೆ.
ಇದಾದ ನಂತರ ರಾಜ್ಯ ಕಂದಾಯ ಇಲಾಖೆಯು 07/01/2022 ರಂದು ಸದರಿ 4 ಎಕರೆ ವಿಸ್ತೀರ್ಣದ ಸ್ಮಶಾನದ ಜಾಗವನ್ನು “ಸೂಲಿಕೆರೆ ಗ್ರಾಮ ಪಂಚಾಯ್ತಿ”ಯ ವಶಕ್ಕೆ ನೀಡಿ ಆದೇಶಿಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ “ಕೆಂಪೇಗೌಡ ಬಡಾವಣೆ”ಗೆ ಸನಿಹದಲ್ಲೇ K. N. ಸುರೇಂದ್ರ (KNS Infrastructure Pvt: Ltd) ಎಂಬ ಪ್ರಭಾವೀ ಸರ್ಕಾರಿ ನೆಲಗಳ್ಳ 120 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಖಾಸಗಿ ಬಡಾವಣೆಯನ್ನು ನಿರ್ಮಿಸುತ್ತಿದ್ದಾನೆ.
ಈತ ನಿರ್ಮಿಸುತ್ತಿರುವ ಖಾಸಗಿ ಬಡಾವಣೆ ಮತ್ತು ಕೆಂಪೇಗೌಡ ಬಡಾವಣೆಯ ಮಧ್ಯೆ ಸೂಲಿಕೆರೆ ಗ್ರಾಮದ ಸ್ಮಶಾನದ ಜಾಗ ಇರುವುದರಿಂದ ಸಹಜವಾಗಿಯೇ K.N. ಸುರೇಂದ್ರ ಈ ಸ್ಮಶಾನದ ಜಾಗವನ್ನು ಹೇಗಾದರೂ ಪಡೆದುಕೊಳ್ಳಲೇಬೇಕೆಂಬ ಹಪಾಹಪಿಯಿಂದ ಕಾನೂನು ಬಾಹಿರ ಕಾರ್ಯಕ್ಕೆ ಮುಂದಾಗಿದ್ದಾನೆ.
ಪ್ರಸ್ತುತ K. N. ಸುರೇಂದ್ರ ನಿರ್ಮಿಸುತ್ತಿರುವ ಖಾಸಗಿ ಬಡಾವಣೆಯಲ್ಲಿನ ನಿವೇಶನಗಳನ್ನು ಪ್ರತೀ ಚ. ಅಡಿಗೆ ₹ 6,000ಗಳಂತೆ ಮಾರಾಟ ಮಾಡಬಹುದಾಗಿದೆ. ಆದರೆ, ತಾನು ನಿರ್ಮಿಸುತ್ತಿರುವ ಖಾಸಗಿ ಬಡಾವಣೆ ಮತ್ತು ಕೆಂಪೇಗೌಡ ಬಡಾವಣೆಯ ಮಧ್ಯಭಾಗದಲ್ಲಿ ಇರುವ ಸೂಲಿಕೆರೆ ಗ್ರಾಮದ ಸರ್ವೆ ನಂ: 77 (ಹಳೆಯ ಸರ್ವೆ ನಂ: 08) ರ 4 ಎಕರೆ ಸ್ಮಶಾನದ ಜಾಗವನ್ನು ತನ್ನ ಕುತಂತ್ರದಿಂದ ಪಡೆದುಕೊಂಡರೆ, ಆ ಜಾಗದಲ್ಲಿ 24 ಮೀಟರ್ ಅಗಲದ ರಸ್ತೆ (80 ಅಡಿ) ಯನ್ನು ನಿರ್ಮಿಸಬಹುದು.
ಬಳಿಕ ತನ್ನಂತಾನೇ ತನ್ನ ಬಡಾವಣೆಯ ನಿವೇಶನಗಳನ್ನು ಪ್ರತೀ ಚ.ಅಡಿಗೆ ₹ 10,000 ಗಳಂತೆ ಮಾರಾಟ ಮಾಡಬಹುದು ಎಂಬ ಲೆಕ್ಕಾಚಾರದೊಂದಿಗೆ ಬೆಂಗಳೂರು ದಕ್ಷಿಣ ತಾಲೂಕಿನ ಉಪ ತಹಸೀಲ್ದಾರ್ ರವಿ ಹಾಗೂ ಸೂಲಿಕೆರೆ ಗ್ರಾಮದ ಗ್ರಾಮ ಲೆಕ್ಕಿಗ (Village Accountant) ಕುಮಾರಸ್ವಾಮಿ ಮತ್ತು ಕೆಂಗೇರಿ ವೃತ್ತದ ರಾಜಸ್ವ ನಿರೀಕ್ಷಕ (Revenue Inspector) ದಿವಾಕರ್ ಎಂಬಿಬ್ಬರು ರಾಜ್ಯ ಕಂದಾಯ ಇಲಾಖೆಯ ನೌಕರರನ್ನು ತನ್ನ ಹಣದ ಪ್ರಭಾವದಿಂದ ಖರೀದಿಸಿದ್ದಾನೆ ಎಂದು ರಮೇಶ್ ಆರೋಪಿಸಿದ್ದಾರೆ.
ಇನ್ನು K. N. ಸುರೇಂದ್ರ ಎಂಬ ಪ್ರಭಾವೀ ಸರ್ಕಾರಿ ನೆಲಗಳ್ಳನಿಂದ ತಿನ್ನಬಾರದ್ದನ್ನು ತಿಂದಿರುವ ಉಪ ತಹಸೀಲ್ದಾರ್ ರವಿ, ಕುಮಾರಸ್ವಾಮಿ (VA) ಮತ್ತು ದಿವಾಕರ್ (RI) ಎಂಬ ಮಹಾ ಭ್ರಷ್ಟರು ಸೂಲಿಕೆರೆ ಗ್ರಾಮದ “ರುದ್ರಭೂಮಿ”ಜಾಗದಲ್ಲಿ KNS Infrastructure Pvt: Ltd ನಿರ್ಮಿಸುತ್ತಿರುವ ಖಾಸಗಿ ಬಡಾವಣೆಯ “ರಸ್ತೆ”ಯನ್ನು ನಿರ್ಮಿಸಿಕೊಳ್ಳಲು “ನಿರಾಕ್ಷೇಪಣಾ ಪತ್ರ” (NOC) ವನ್ನು ನೀಡಬಹುದೆಂದು ಟಿಪ್ಪಣಿಯನ್ನು ಮಂಡಿಸಿ, ಅನುಮೋದನೆಗೆಂದು ಬೆಂಗಳೂರು ದಕ್ಷಿಣ ತಾಲೂಕಿನ ತಹಸೀಲ್ದಾರ್ ಅವರಿಗೆ ಕಳುಹಿಸಿಕೊಟ್ಟಿದ್ದಾರೆ.
“ಸ್ಮಶಾನ ಜಾಗ”ವನ್ನು ಬೇರೆ ಉದ್ದೇಶಗಳಿಗೆ ಬಳಸಲು ಕಾನೂನು ರೀತ್ಯಾ ಅವಕಾಶವಿಲ್ಲದಿದ್ದರೂ ಸಹ ಮತ್ತು 07/01/2022 ರಂದು ರಾಜ್ಯ ಕಂದಾಯ ಇಲಾಖೆಯು “ಸೂಲಿಕೆರೆ ಗ್ರಾಮ ಪಂಚಾಯ್ತಿ”ಯ ವಶಕ್ಕೆ ನೀಡಿದ್ದರೂ ಸಹ – 100 ಕೋಟಿ ರೂ. ಗಳಿಗೂ ಹೆಚ್ಚು ಮೌಲ್ಯದ ಸರ್ಕಾರಿ ಸ್ಮಶಾನದ ಜಾಗವನ್ನು ಕಾನೂನಿನ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ K. N. ಸುರೇಂದ್ರ ಎಂಬ ಪ್ರಭಾವೀ ಸರ್ಕಾರಿ ನೆಲಗಳ್ಳನ ಖಾಸಗಿ ಬಡಾವಣೆಗೆಂದು ಬಿಟ್ಟುಕೊಡುವ ದುರುದ್ದೇಶದಿಂದ “ಕಾನೂನು ಬಾಹಿರ ಟಿಪ್ಪಣಿ”ಮಂಡಿಸಿರುವ ಈ ಭ್ರಷ್ಟ ನೌಕರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು
ಹಾಗೆಯೇ K. N. ಸುರೇಂದ್ರ ಎಂಬ ಸರ್ಕಾರಿ ನೆಲಗಳ್ಳನ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಎಂಥದ್ದೇ ಸಂದರ್ಭದಲ್ಲಿಯೂ “ಸೂಲಿಕೆರೆ”ಗ್ರಾಮದ 04 ಎಕರೆ ವಿಸ್ತಿರ್ಣದ “ಸ್ಮಶಾನ”ದ ಜಾಗ ಬೇರೆ ಯಾವುದೇ ಉದ್ದೇಶಕ್ಕೆ ಬಳಕೆಯಾಗದಂತೆ ಹಾಗೂ ಯಾವೊಬ್ಬ ಪ್ರಭಾವಿ ಸರ್ಕಾರಿ ನೆಲಗಳ್ಳರು ಕಬಳಿಸಲು ಅನುವು ಮಾಡಿಕೊಡದಂತೆ ಕ್ರಮ ವಹಿಸಬೇಕೆಂದು ಬೆಂಗಳೂರು ನಗರ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳನ್ನು ಹಾಗೂ ಬೆಂಗಳೂರು ದಕ್ಷಿಣ ತಾಲೂಕಿನ ತಹಸೀಲ್ದಾರ್ ಅವರನ್ನು ಆಗ್ರಹಿಸಿದ್ದಾರೆ.
ಅಲ್ಲದೇ, ಈ ಸಂಬಂಧ ಬೆಂಗಳೂರು ದಕ್ಷಿಣ ತಾಲೂಕಿನ ಉಪ ತಹಸೀಲ್ದಾರ್ ರವಿ, ರಾಜ್ಯ ಕಂದಾಯ ಇಲಾಖೆಯ ಕೆಂಗೇರಿ ವೃತ್ತದ RI ದಿವಾಕರ್, ಸೂಲಿಕೆರೆ ಗ್ರಾಮದ VA ಕುಮಾರಸ್ವಾಮಿ ವಿರುದ್ಧ ಮತ್ತು K. N. ಸುರೇಂದ್ರ ಎಂಬ ಸರ್ಕಾರಿ ನೆಲಗಳ್ಳನ ವಿರುದ್ಧ “ಭಾರತೀಯ ನ್ಯಾಯ ಸಂಹಿತೆ (BNS), 2023” ರ ಅನ್ವಯ ಭ್ರಷ್ಟಾಚಾರ, ವಂಚನೆ, ಅಧಿಕಾರ ದುರುಪಯೋಗ ಮತ್ತು ಸರ್ಕಾರಿ ಸ್ವತ್ತು ಕಬಳಿಸಲು ಸಂಚು ಪ್ರಕರಣಗಳನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಲೋಕಾಯುಕ್ತ ADGP ಹಾಗೂ ಲೋಕಾಯುಕ್ತ SP – 01 ಅವರಿಗೆ ದಾಖಲೆಗಳ ಸಹಿತ ದೂರು ಸಲ್ಲಿಸಲಾಗಿದೆ ಎಂದು ರಮೇಶ್ ತಿಳಿಸಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)