ನ್ಯೂಡೆಲ್ಲಿ: ಕನೂರಿ ಗಡಿಯ ಹೋರಾಟ ದೇಶದ ರೈತರ ಹಿತರಕ್ಷಣೆಯ ಹೋರಾಟವಾಗಿದ್ದು ಈ ಹೋರಾಟಕ್ಕೆ ನಾಳೆಗೆ ಒಂದು ವರ್ಷವಾಗುತ್ತಿದ್ದು ರೈತರಿಗೆ ದುಃಖದ ವರ್ಷವಾಗಿಯೇ ತುಂಬುತ್ತಿದೆ.
ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯೆತರ ಸಂಘಟನೆ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಸೇರಿದಂತೆ ದೇಶದ ರೈತರ ಸಾಲಮನ್ನಾ ಆಗಬೇಕು. ಸ್ವಾಮಿನಾಥನ್ ವರದಿ ಜಾರಿಗೆ ಬರಬೇಕು ಎಂದು ಆಗ್ರಹಿಸಿ ನಡೆಸುತ್ತಿರುವ ಹೋರಾಟ ವರ್ಷ ಕಳೆಯುತ್ತಿದ್ದರೂ ಸರ್ಕಾರ ಕಣ್ಣುಮುಚ್ಚಿಕುಳಿತಿದೆ ಎಂದು ರೈತ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.
60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ಬರಬೇಕು ಎಂಬ ಒತ್ತಾಯಗಳ ಬಗ್ಗೆ ಕಳೆದ ವರ್ಷ 2024ರ ಫೆಬ್ರವರಿ 13 ರಂದು ಆರಂಭಿಸಿದ್ದ ಅಂದು ದೆಹಲಿಗೆ ಹೋಗಲು ಟ್ರ್ಯಾಕ್ಟರ್ ರ‍್ಯಾಲಿ ಹೋಗುತ್ತಿದ್ದಾಗ ಹರಿಯಾಣ ಸರ್ಕಾರ ರಸ್ತೆ ಮಧ್ಯದಲ್ಲಿ ತಡೆದ ಪರಿಣಾಮವಾಗಿ ಚಳವಳಿ ಮುಂದುವರಿಯುತ್ತಿದೆ. ಇದರ ಅಂಗವಾಗಿ ಒಂದು ವರ್ಷ ತುಂಬಿದ ಕ್ರಾಂತಿ ದಿನ ಆಚರಣೆಗಾಗಿ ಇಂದು ಗುರುವಾರ ಫೆ.12ರಂದು ಕನೂರಿಯಲ್ಲಿ ಕಿಸಾನ್ ರ‍್ಯಾಲಿ ನಡೆಸಲಾಯಿತು.
ಈ ರ‍್ಯಾಲಿಯಲ್ಲಿ ಭಾಗವಹಿಸಿದ ದಕ್ಷಿಣ ಭಾರತ ರಾಜ್ಯಗಳ ಸಂಚಾಲಕ ರೈತ ಮುಖಂಡ ಕುರುಬೂರು ಶಾಂತಕುಮಾರ್ ಮಾತನಾಡಿ, ದೇಶಕ್ಕೆ ಸ್ವತಂತ್ರ ಬಂದ 76 ವರ್ಷಗಳಲ್ಲಿ ರೈತನ ಬದುಕು ಆತ್ಮಹತ್ಯೆ ಹಾದಿಯಲ್ಲಿ ಸಾಗಿದೆ. ರೈತರು ವಲಸೆ ಹೋಗುತ್ತಿದ್ದಾರೆ. ರೈತರ ದೇಶ, ಕೃಷಿ ಅವಲಂಬಿತರ ದೇಶ. ರೈತ ದೇಶದ ಬೆನ್ನೆಲುಬು ಎನ್ನುತ್ತಾರೆ ಆಡಳಿತಗಾರರು. ಆದರೆ ಬೆನ್ನೆಲುಬನ್ನೇ ಮುರಿಯುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಮತ್ತೊಂದು ಕಡೆ ಪ್ರಕೃತಿ ವಿಕೋಪ. ಹವಮಾನ ವೈಪರಿತ್ಯ ಕೂಡ ರೈತನನ್ನು ಸಂಕಷ್ಟಕ್ಕೆ ತಳ್ಳುತ್ತಿವೆ. ಆದರೆ ರೈತರಿಂದ ಆಯ್ಕೆಯಾದ ಕೇಂದ್ರ ಸರ್ಕಾರ ರೈತರ ಸಮಸ್ಯೆಗಳ ಬಗ್ಗೆ ನಿರ್ಲಕ್ಷತನ ತೋರುತ್ತಿದೆ. ಶೇ.2 ಇರುವ ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡಲು ಒಂದು ವರ್ಷ ಮೊದಲೇ ವೇತನವನ್ನು ಏರಿಕೆ ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.
ಆದರೆ ಶೇ.70ರಷ್ಟು ಇರುವ ರೈತರು ನಾಲ್ಕು ವರ್ಷಗಳಿಂದ ಹೋರಾಟ ಮಾಡುತ್ತಿದ್ದರು ನಿರ್ಲಕ್ಷ ಮಾಡುತ್ತಿದ್ದಾರೆ. ಯಾಕೆ ಈ ರೀತಿಯ ತಾರತಮ್ಯ? ಈ ಬಗ್ಗೆ ನಾವು ಗೆಲ್ಲಿಸಿದ ಜನಪ್ರತಿನಿಧಿಗಳು ನಿದ್ರೆ ಮಾಡುವ ನಾಟಕವಾಡುತ್ತಿದ್ದಾರೆ. ಇನ್ನು ಈಗ ಬ್ಯಾಂಕುಗಳು ರೈತರ ಜಮೀನು ಮುಟ್ಟುಗೊಲು ಹಾಕುವ ಸರ್ಪ್ರೈಸಿ ಕಾಯ್ದೆ ರೂಪಿಸಿ ಕೃಷಿಕರ ಜಮೀನು ಕಿತ್ತುಕೊಂಡು ಒಕ್ಕಲಿಬ್ಬಿಸುವ ಕೆಲಸ ಮಾಡುತ್ತಿದ್ದಾರೆ.
ನಮ್ಮೆಲ್ಲರ ಪ್ರಧಾನಿಗಳು ಕಾಣದ ಕೈಗಳ ಒತ್ತಡದಲ್ಲಿ ಸಿಲುಕಿ ಆಡಳಿತ ನಡೆಸುವ ಕಾರಣದಿಂದ ರೈತರ ಬದುಕು ಬೀದಿಪಾಲಾಗಿದೆ. ಬಿಜೆಪಿ ಪಕ್ಷ ಎಂದರೆ ಬಿಸಿನೆಸ್ ಮ್ಯಾನ್‌ಗಳ ಪಕ್ಷ ಎಂದು ಕರೆಯುತ್ತಾರೆ. ನಮ್ಮ ಹೋರಾಟ ಇರುವುದು ಕಬ್ಬಿಗೆ ಎಫ್‌ಆರ್‌ಪಿ ದರ ಶಾಸನಬದ್ಧವಾಗಿ ನಿಗದಿ ಮಾಡಬೇಕು ಎಂದು. ಅದೇ ರೀತಿ ಎಲ್ಲ ಕೃಷಿ ಉತ್ಪನ್ನಗಳಿಗೂ ನಿಗದಿ ಮಾಡಿ ಎಂಬುದು ನಮ್ಮ ಒತ್ತಾಯ.
ಅದಕ್ಕೆ ಸರ್ಕಾರ ಯಾಕೆ ನಿರ್ಲಕ್ಷತನ ತೋರುತ್ತಿದೆ. ಹತ್ತು ವರ್ಷವಾದರೂ ಸರಿ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಈಗಾಗಲೇ ಸಾವಿರಾರು ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಸಾವಿರಾರು ರೈತರ ಹೆಣ ಬಿದ್ದರೂ ಸರಿ ನಾವು ಹಿಂದೆ ಹೋಗಬಾರದು ಎಂಎಸ್‌ಪಿ ಖಾತ್ರಿ ಕಾನೂನು ಜಾರಿ ಆಗಲೇಬೇಕು ಎಂಬುದು ನಮ್ಮೆಲ್ಲರ ಶಪತವಾಗಬೇಕು ಎಂದರು.
ಇನ್ನು ಈ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ನಾವು ದಕ್ಷಿಣ ಭಾರತ ರಾಜ್ಯಗಳ ರೈತರು ನಿಮ್ಮ ಜತೆ ನಿಲ್ಲುತ್ತೇವೆ ಎಂದು ಕುರುಬೂರು ಶಾಂತಕುಮಾರ್ ಹೇಳಿದರು.
ತಮಿಳುನಾಡಿನ ಪಿಆರ್ ಪಾಂಡನ್, ಉತ್ತರ ಪ್ರದೇಶದ ಹರಪಾಲ್ ಬಿಲಾರಿ, ಹರಿಯಾಣದ ಅಭಿಮನ್ಯು ಕೂಹರ್, ಹರಿಯಾಣದ ಲಕ್ವಿನ್ ಧರರ್ಸಿಂಗ್, ಪಂಜಾಬ್ ಸುಕ್‌ಜೀತ್ ಸಿಂಗ್, ಬಿಹಾರ್ ಅರುಣ್ ಸಿನ್ಹಾ ಇದ್ದರು. ಜಗಜಿತ್ ಸಿಂಗ್ ದಲೈವಾಲ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾವೇಶದ ರೈತರಿಗೆ ಸಂದೇಶ ಕಳಿಸಿದರು.