ಹಾವೇರಿ: ಕೋವಿಡ್ ಲಾಕ್‍ಡೌನ್‍ನಿಂದ ತೊಂದರೆಗೊಳಗಾದ ರೈತಾಪಿ ಜನರಿಗೆ ಹೊಸ ಪ್ಯಾಕೇಜ್ ಘೋಷಣೆ ಕುರಿತಂತೆ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆಯಲಾಗಿದೆ. ಮೇ 3ರ ನಂತರ ನೂತನ ಪ್ಯಾಕೇಜ್ ಘೋಷಣೆ ನಿರೀಕ್ಷಿಸಲಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ತಿಳಿಸಿದರು.
ಹಾವೇರಿ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗೋವಿನಜೋಳ ಬೆಂಬಲಬೆಲೆಯಡಿ ಖರೀದಿಮಾಡುವ ಕುರಿತಂತೆ ಈಗಾಗಲೇ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಗೋವಿನಜೋಳ ಹೆಚ್ಚು ಬೆಳೆಯುವ ರಾಜ್ಯದ ಹಾವೇರಿ, ದಾವಣಗೆರೆ, ಗದಗ, ಧಾರವಾಡ, ಶಿವಮೊಗ್ಗ ಜಿಲ್ಲೆಗಳ ರೈತರಿಂದ ಬೆಂಬಲಬೆಲೆಯಡಿ ಖರೀದಿಗೆ ವಿಶೇಷ ಪ್ಯಾಕೇಜ್‍ಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಲಾಕ್‍ಡೌನ್ ಅವಧಿಯಲ್ಲಿ ಉದ್ಯೋಗ ಅರಸಿ ಬೇರೆ ರಾಜ್ಯ ಮತ್ತು ಜಿಲ್ಲೆಗಳಿಂದ ಹಾವೇರಿ ಜಿಲ್ಲೆಯಲ್ಲಿ ಉಳಿದಿರುವ ಕಾರ್ಮಿಕರು ಹಾಗೂ ಹಾವೇರಿ ಜಿಲ್ಲೆಯಿಂದ ಬೇರೆ ಬೇರೆ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಉಳಿದುಕೊಂಡಿರುವ ಕಾರ್ಮಿಕರು ತಮ್ಮ ತಮ್ಮ ಸ್ವಂತ ಗ್ರಾಮಕ್ಕೆ ತೆರಳುವ ಅಪೇಕ್ಷೆ ಹೊಂದಿದ್ದಾರೆ. ಮೇ 3ರ ನಂತರ ಸಾಮಾಜಿಕ ಅಂತರ ಕಾಯ್ದುಕೊಂಡು ಅವರವರ ಗ್ರಾಮಗಳಿಗೆ ಕಳುಹಿಸುವ ಕುರಿತಂತೆ ಚರ್ಚಿಸಲಾಗುತ್ತದೆ. ರೈಲು, ಬಸ್ಸುಗಳಲ್ಲಿ ಸಾಮಾಜಿಕ ಅಂತರದಲ್ಲಿ ಆಸನ ವ್ಯವಸ್ಥೆಮಾಡಿ ಅವರವರ ಊರಿಗೆ ಕಳುಹಿಸುವುದು, ತಮ್ಮ ಗ್ರಾಮ ತಲುಪಿದ ಮೇಲೆ ನಿಯಮಾನುಸಾರ ಗೃಹಪ್ರತ್ಯೇಕತೆಯಲ್ಲಿ ಇರಿಸುವ ಕುರಿತಂತೆ ತೀರ್ಮಾನಿಸಲಾಗುವುದು ಎಂದು ಹೇಳಿದರು.
ರೈತರ ಸಾಲದ ಕಂತುಗಳನ್ನು ಮೂರು ತಿಂಗಳು ಮುಂದೂಡುವ ಕುರಿತಂತೆ ಈಗಾಗಲೇ ಚಚಿಸಲಾಗಿದೆ. ಲಾಕ್‍ಡೌನ್‍ನಿಂದ ಮೆಣಸಿನಕಾಯಿ ವ್ಯಾಪಾರಿಗಳು, ದಲ್ಲಾಳಿಗಳಿಗೆ ಉಂಟಾಗಿರುವ ತೊಂದರೆ ಕುರಿತಂತೆ ಈಗಾಗಲೇ ಚರ್ಚಿಸಲಾಗಿದೆ. ಬ್ಯಾಂಕ್‍ಗಳೊಂದಿಗೆ ಚರ್ಚಿಸಿ ಓಓಡಿ ನೀಡುವಂತೆ ಸಲಹೆ ಮಾಡಲಾಗಿದೆ. ಬ್ಯಾಡಗಿ ಮಾರುಕಟ್ಟೆಗೆ ಹೊರರಾಜ್ಯಗಳಿಂದ ಬರುವ ಚಾಲಕರು, ಹಮಾಲರಿಗೆ ವೈದ್ಯಕೀಯ ತಪಾಸಣೆಯನ್ನು ತೀವ್ರಗೊಳಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಶಾಸಕರಾದ ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಜಿಲ್ಲಾ ಪಂಚಾಯತ್ ಸದಸ್ಯ ಸಿದ್ಧರಾಜ ಕಲಕೋಟಿ ಉಪಸ್ಥಿತರಿದ್ದರು.