NEWSಬೆಂಗಳೂರುರಾಜಕೀಯ

ಗೋವಿಂದರಾಜ್ ವಿರುದ್ಧ ಸರ್ಕಾರ ಕ್ರಮ, ಅಷ್ಟಾದ್ರೂ ಜ್ಞಾನೋದಯವಾಗಿದ್ದಕ್ಕೆ ಅಭಿನಂದನೆಗಳು: ಎಚ್‌ಡಿಕೆ ವ್ಯಂಗ್ಯ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಗೆಲುವಿನ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಗೋವಿಂದರಾಜ್ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದ್ದು, ಸರ್ಕಾರಕ್ಕೆ ಅಷ್ಟಾದ್ರೂ ಜ್ಞಾನೋದಯವಾಗಿದ್ದಕ್ಕೆ ಅಭಿನಂದನೆಗಳು ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಿಂದರಾಜ್‌ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಕೆಳಗಿಳಿಸಿದ್ದಾರೆ. ಆದರೆ, ಪೊಲೀಸ್ ಅಧಿಕಾರಿಗಳು ತಪ್ಪು ಮಾಡಿದ್ದಾರೆ ಅಂತ ಐವರನ್ನು ತರಾತುರಿಯಲ್ಲಿ ಅಮಾನತು ಮಾಡಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಅವರ ಅಮಾನತು ಅವಶ್ಯಕತೆ ಇರಲಿಲ್ಲ. ಸರ್ಕಾರ ಈ ರೀತಿ ತೀರ್ಮಾನ ಮಾಡಿದ್ರೆ ಅಧಿಕಾರಿಗಳು ಹೇಗೆ ಕೆಲಸ ಮಾಡಲು ಸಾಧ್ಯ ಎಂದು ಕೇಳಿದರು.

ಇನ್ನು ಸರ್ಕಾರದತನ್ನ ತಪ್ಪುಗಳನ್ನು ಮುಚ್ಚಿಕೊಳ್ಳೋಕೆ ಅಧಿಕಾರಿಗಳ ತಲೆದಂಡ ಮಾಡೋದು ಎಷ್ಟು ಸರಿ. ಹೀಗೆ ಮಾಡಿದ್ರೆ ಅವರು ಹೇಗೆ ಶ್ರದ್ಧೆಯಿಂದ ಕೆಲಸ ಮಾಡೋಕೆ ಸಾಧ್ಯ? ಸರ್ಕಾರ ಇದನ್ನು ಯೋಚನೆ ಮಾಡಬೇಕಿತ್ತು ಎಂದು ಹೇಳಿದರು.

ಅಲ್ಲದೆ ಪ್ರಕರಣದಲ್ಲಿ ನಡೆದಿರೋ ವಾಸ್ತವಾಂಶಗಳೇ ಬೇರೆ ಇವೆ. ಪಾರದರ್ಶಕವಾಗಿ ಆಡಳಿತ ಕೊಡ್ತೀವಿ. ಸತ್ಯ ನಿಷ್ಠೆಯಿಂದ ಆಡಳಿತ ಮಾಡ್ತೀವಿ ಅಂತಾರೆ. ಇಂತಹ ಸನ್ನಿವೇಶದಲ್ಲಿ ಸರ್ಕಾರ ತೆಗೆದುಕೊಂಡ ತೀರ್ಮಾನಕ್ಕೆ ಜನಾಭಿಪ್ರಾಯ ಏನು ಅಂತ ಈಗ ಗೊತ್ತಾಗ್ತಿದೆ ಎಂದು ವಾಗ್ದಾಳಿ ನಡೆಸಿದರು.

ಹೆಣದ ಮೇಲೆ ಬಿಜೆಪಿ-ಜೆಡಿಎಸ್ ರಾಜಕೀಯ ಮಾಡ್ತಿದೆ ಎಂಬ ಸಿಎಂ, ಡಿಸಿಎಂ ಹೇಳಿಕೆ ಸಂಬಂಧ, ಹೆಣದ ಮೇಲೆ ರಾಜಕೀಯ ಮಾಡೋ ಅವಶ್ಯಕತೆ ನಮಗೆ ಇಲ್ಲ. ರಾಜ್‍ಕುಮಾರ್ ಘಟನೆ ಬಗ್ಗೆ ನಾನೇ ಹೇಳಿದ್ದೇನೆ. ಆ ಕೇಸಲ್ಲಿ ಅಶಾಂತಿ ವಾತಾವರಣ ಉಂಟು ಮಾಡಲು ಪ್ರಯತ್ನ ಪಟ್ಟರು, ಸೀಮೆಎಣ್ಣೆ, ಪೆಟ್ರೋಲ್ ತಂದು ಶಾಂತಿಯುತವಾಗಿ ಆಗಬೇಕಾದ ಅಂತ್ಯಕ್ರಿಯೆಯಲ್ಲಿ ಅಶಾಂತಿ ಉಂಟು ಮಾಡುವ ಕೆಲಸ ಆಯ್ತು. ಈ ವೇಳೆ, ಗೋಲಿಬಾರ್ ಆಯ್ತು. ಅದರಲ್ಲಿ ಇಬ್ಬರು ಸತ್ತಿದ್ದಾರೆ. ಅದನ್ನು ನಾನು ಓಪನಾಗಿ ಹೇಳ್ತಿದ್ದೇನೆ. ಆ ಘಟನೆಗೂ ಇದಕ್ಕೂ ಯಾಕೆ ಹೋಲಿಕೆ ಮಾಡ್ತೀರಾ ಎಂದು ಪ್ರಶ್ನಿಸಿದರು.

ಇನ್ನು ಮೊದಲ ಬಾರಿಗೆ ಅಂದು ಅಧಿಕಾರಕ್ಕೆ ಬಂದಿದ್ದೆ. ಅಂತಹ ದೊಡ್ಡ ವ್ಯಕ್ತಿ ನಿಧನರಾಗಿದ್ದು ಅವತ್ತು ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳೋದಕ್ಕೂ ಮುನ್ನವೇ ಆಸ್ಪತ್ರೆ ಬುಲೆಟಿನ್ ಹೊರಡಿಸಿತ್ತು. ಅದಕ್ಕೆ ಹಾಗೆ ಆಯ್ತು. ಅದಕ್ಕೂ ಇದಕ್ಕೂ ಹೋಲಿಕೆ ಮಾಡಬೇಡಿ. ಇದು ಹೊಂದಾಣಿಕೆ ಆಗುವುದಿಲ್ಲ ಎಂದು ಹೇಳಿದರು.

ಕಾಲ್ತುಳಿತ ಪ್ರಕರಣದ ಸಂಪೂರ್ಣ ಜವಾಬ್ದಾರಿ ಸಿಎಂ, ಡಿಸಿಎಂ, ಗೃಹ ಸಚಿವರು ತೆಗೆದುಕೊಳ್ಳಬೇಕು. ಇದರಲ್ಲಿ 3 ಜನರದ್ದು ತಪ್ಪಿದೆ. ಏಕಾಏಕಿ 24 ಗಂಟೆ ಒಳಗೆ ಸನ್ಮಾನ ಮಾಡೋದು ಏನಿತ್ತು? ಅಲ್ಲದೆ ಸನ್ಮಾನವನ್ನು ಸರಿಯಾಗಿ ಮಾಡಿದ್ರಾ? ಆಟಗಾರರನ್ನು ಸರಿಯಾಗಿ ನಡೆಸಿಕೊಂಡ್ರಾ? ಬೇಕಾಬಿಟ್ಟಿ ಸನ್ಮಾನ ಮಾಡಿದ್ರಿ. ನೀವು ಕೊಟ್ಟ ಶಾಲು, ಟೋಪಿ ಎಲ್ಲ ಅವರು ತಗೊಂಡು ಹೋದ್ರಾ, ಬಿಸಾಕಿ ಹೋದ್ರಾ ಗೊತ್ತಿಲ್ಲ. ಇದಕ್ಕೆ ತರಾತುರಿಯಲ್ಲಿ ಕಾರ್ಯಕ್ರಮ ಬೇಕಿತ್ತಾ? ಜವಾಬ್ದಾರಿ ತಗೊಂಡೋರು ನೈತಿಕತೆ ಇದ್ದರೆ ರಾಜೀನಾಮೆ ಕೊಡಬೇಕು.

ಅದರಲ್ಲಿ ಪ್ರಮುಖವಾಗಿ ಸಿಎಂ, ಡಿಸಿಎಂ, ಗೃಹ ಸಚಿವರು ನೈತಿಕತೆ ಇದ್ದರೆ ರಾಜೀನಾಮೆ ಕೊಡಬೇಕು. ಇಲ್ಲ ನಾವು ಇರೋದೆ ಹೀಗೆ ಎಂದರೆ ಜನರೆ ನೋಡಿಕೊಳ್ಳುತ್ತಾರೆ ಬಿಡಿ ಎಂದರು.

Megha
the authorMegha

Leave a Reply

error: Content is protected !!