ಮಂಡ್ಯ: ಕೊರೊನಾ ತಪಾಸಣೆ ಮಾಡಿಸಿಕೊಳ್ಳಲು ಬಂದಿದ್ದ ಜಿಲ್ಲೆಯ ಪತ್ರಕರ್ತನ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮತ್ತು ಅವರ ಪುತ್ರ ಕೃಶಿಕ್ ವಿರುದ್ಧ FIR ದಾಖಲಾಗಿದೆ.
ಪತ್ರಕರ್ತರ ಆರೋಗ್ಯ ತಪಾಸಣೆಯನ್ನು ಶನಿವಾರ ಡಾ ಬಿಆರ್ ಅಂಬೇಡ್ಕರ್ ಭವನದಲ್ಲಿ ನಡೆಸುವುದಕ್ಕೆ ತಯಾರಿ ಮಾಡಲಾಗಿತ್ತು. ಆದರೆ ತನ್ನ ಮನೆ ಸಮೀಪದಲ್ಲಿ ಇರುವ ಭವನದಲ್ಲಿ ಆರೋಗ್ಯ ತಪಾಸಣೆ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಶ್ರೀಕಂಠೇಗೌಡ ತನ್ನ ಬೆಂಬಲಿಗರೊಂದಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಅಲ್ಲದೇ ಈ ಸಂಬಂಧ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದರು. ಇದರಿಂದ ಸ್ಥಳದಲ್ಲಿ ಕೆಲ ಕಾಲ ಗೊಂದಲ ವಾತಾವರಣ ನಿರ್ಮಾಣವಾಗಿತ್ತು.
ಭವನದಲ್ಲಿ ಪರೀಕ್ಷೆಗಳನ್ನು ನಡೆಸಲು ಅವಕಾಶ ನೀಡಿರುವುದಕ್ಕೆ ಶ್ರೀಕಂಠೇಗೌಡ ಮತ್ತು ಬೆಂಬಲಿಗರು ಜಿಲ್ಲಾಡಳಿತವನ್ನು ಟೀಕಿಸಿದ್ದಾರೆ. ಇದನ್ನು ಮಾಧ್ಯಮ ಪ್ರತಿನಿಧಿಗಳು ವಿರೋಧಿಸಿದ್ದಾರೆ. ಇದರಿಂದ ಶ್ರೀಕಂಠೇಗೌಡ, ಅವರ ಪುತ್ರ ಮತ್ತು ಬೆಂಬಲಿಗರು ಸ್ಥಳದಲ್ಲಿಯೇ ಸರ್ಕಾರಿ ಸಿಬ್ಬಂದಿಯನ್ನು ನಿಂದಿಸಿದ್ದಾರೆ. ಕೃಶಿಕ್ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ ಆತನನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಜಿಲ್ಲಾಡಳಿತ ಪರಿಶೀಲನೆ ನಡೆಸಿ, ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಹೇಳಿದ್ದಾರೆ.
ಕರ್ನಾಟಕ ಪತ್ರಕರ್ತರ ಒಕ್ಕೂಟ (ಕೆಜೆಯು) ಈ ಘಟನೆಯನ್ನು ಖಂಡಿಸಿದ್ದು, ಶ್ರೀಕಂಠೇಗೌಡ, ಅವರ ಪುತ್ರ ಮತ್ತು ಬೆಂಬಲಿಗರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ಆರೋಪಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮಂಡ್ಯ ಜಿಲ್ಲೆಯ ಕೆಜೆಯು ಅಧ್ಯಕ್ಷ ಬಿ.ಟಿ. ಮೋಹನ್‌ಕುಮಾರ್ ಒತ್ತಾಯಿಸಿದ್ದಾರೆ.
ಈ ಸಂಬಂಧ ಕೆ.ಟಿ.ಶ್ರೀಕಂಠೇಗೌಡ ಮತ್ತು ಅವರ ಪುತ್ರ ಕೃಶಿಕ್ ವಿರುದ್ಧ ಪೊಲೀಸರು FIR ದಾಖಲಿಸಿದ್ದು ವಿಚಾರಣೆಗಾಗಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.