ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಘೋಷಿಸಿರುವ ಮೇ 3 ರ ನಂತರದ ಲಾಕ್ ಡೌನ್ 2.0 ಅವಧಿ ಮುಕ್ತಾಯಗೊಂಡ ನಂತರ ಸರಳೀಕರಣಗೊಳಸಿಬೇಕು ಎಂಬ ವಿವಿಧ ವಲಯಗಳಲ್ಲಿನ ಅಭಿಪ್ರಾಯದ ಹಿನ್ನೆಲೆಯಲ್ಲಿ ಮೇ 4 ರಿಂದ ಧಾರಕ ವಲಯ ( ನಿರ್ಬಂಧಿತ ವಲಯ ಅಥವಾ ಕಂಟೈನ್ಮೆಂಟ್ ಜೋನ್ ) ಹೊರತುಪಡಿಸಿ ಉಳಿದೆಡೆಗಳಲ್ಲಿ ಕೈಗಾರಿಕೆಗಳ ಪುನರಾರಂಭಕ್ಕೆ ಅವಕಾಶ ಕಲ್ಪಿಸಲು ರಾಜ್ಯ ಸಚಿವ ಸಂಪುಟ ಸಮ್ಮತಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ತಮ್ಮ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆಯಲ್ಲಿ ಮಾತನಾಡಿದ ಅವರು ಸಂಜೆ ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಕೈಗಾರಿಕೋದ್ಯಮಿಗಳ ಜೊತೆಗೆ ತಾವು ಮತ್ತು ಕೈಗಾರಿಕಾ ಸಚಿವರು ಮಾತುಕತೆ ನಡೆಸಿದ ನಂತರ ಈ ಬಗ್ಗೆ ಮತ್ತಷ್ಟು ವಿವರ ನೀಡುವುದಾಗಿ ಹೇಳಿದರು.
ಕೈಗಾರಿಕೆಗಳನ್ನು ಪ್ರಾರಂಭ ಮಾಡಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲು ತಿಳಿಸಲು ಇಚ್ಛಿಸಿದ್ದೇವೆ. ಪ್ರಸ್ತು ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಬರುತ್ತಿದೆ. ಅಲ್ಲದೆ, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿಯೂ ಕೊವಿಡ್‍ನ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿಲ್ಲ. ಪರಿಸ್ಥಿತಿಯು ಇದೇ ರೀತಿ ಮುಂದುವರೆದರೆ ಬೆಂಗಳೂರಿನ ಸುತ್ತಮುತ್ತಲೂ ಕೂಡಾ ಕೈಗಾರಿಕೆಗಳನ್ನು ಪ್ರಾರಂಭ ಮಾಡಲು ಅನುಕೂಲಕರ ವಾತಾವರಣ ಸ್ಥಷ್ಠಿಯಾದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಬಹಳ ಮುಖ್ಯವಾಗಿ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಭಯಭೀತರಾಗುವಂತಹ, ಆತಂಕ ಪಡುವಂತಹ ಹಾಗೂ ಖಿನ್ನತೆಗೆ ಒಳಗಾಗುವಂತಹ ಸುದ್ದಿಗಳನ್ನು ಪ್ರಸಾರ ಮಾಡದಿರಲು ಮಾಧ್ಯಮದವರಲ್ಲಿ ಕಳಕಳಿಯ ಮನವಿ ಮಾಡಿದ ಮುಖ್ಯಮಂತ್ರಿಯವರು ಕೊರೊನಾ ವೈರಾಣುವಿನ ಉಪಟಳದಿಂದ ಚೇತರಿಸಿಕೊಂಡವರ ಬಗ್ಗೆ, ಕೊರೊನಾ ಸೈನಿಕರ ಯಶೋಗಾಥೆಯ ಬಗ್ಗೆ ಸಕಾರಾತ್ಮಕ ಸುದ್ದಿಗಳನ್ನು ಬಿತ್ತರಿಸಿ ಸಾರ್ವಜನಿಕರಲ್ಲಿ ಆತ್ಮ ಸ್ಥೈರ್ಯವನ್ನು ತುಂಬುವಂತೆ ಸಲಹೆ ಮಾಡಿದರು.
ಎರಡೂ ಕೂಡಾ ಏಕ ಕಾಲಕ್ಕೆ ಆಗಬೇಕು
ಮೇ 4 ರ ನಂತರವೂ ಕೊರೊನಾ ಇನ್ನೂ ಎರಡು ಮೂರು ತಿಂಗಳು ಮುಂದುವರಿದರೂ ಆಶ್ಚರ್ಯಪಡಬೇಕಿಲ್ಲ. ಹಾಗಾಗಿ ನಮ್ಮ ಆರ್ಥಿಕ ಚಟುವಟಿಕೆಗಳು ಹಾಗೂ ಕೊರೊನಾ ನಿಯಂತ್ರಣ ಎರಡೂ ಕೂಡಾ ಏಕ ಕಾಲಕ್ಕೆ ಆಗಬೇಕು. ಆರ್ಥಿಕ ಚಟುವಟಿಕೆಗಳನ್ನು ಪ್ರಾರಂಭಿಸಲು ಏನೇನು ಸಾಧ್ಯವೋ ಅದಕ್ಕೆ ಅನುಮತಿ ನೀಡುವುದು ಪ್ರಧಾನ ಮಂತ್ರಿಯವರ ಅಪೇಕ್ಷೇಯೂ ಹೌದು.
ಮೇ 4 ರ ನಂತರ ಪ್ರಧಾನಿ ಏನು ನಿರ್ದೇಶನ ನೀಡುತ್ತಾರೋ ಅದನ್ನು ಅನುಸರಿಸಿ ನಾವು ಎಲ್ಲೆಡೆ ಆರ್ಥಿಕ ಚಟುವಟಿಕೆಗಳನ್ನು ಹಾಗೂ ವ್ಯಾಪಾರ ವಹಿವಾಟುಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ. ತಮ್ಮ ಸಲಹೆ ಹಾಗೂ ಮಾರ್ಗದರ್ಶನಗಳನ್ನು ಸರ್ಕಾರವು ಸದಾ ತೆರೆದ ಮನಸ್ಸಿನಲ್ಲಿ ಸ್ವೀಕರಿಸಲಿದೆ. ಸೂಕ್ಷ್ಮ ಮತ್ತು ವಿಷಮ ಪರಿಸ್ಥಿತಿಯಲ್ಲಿ ತಮ್ಮ ಪಾತ್ರ ಗಣನೀಯವಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗೂಡಿ ಶ್ರಮಿಸೋಣ ಎಂದು ಆಶಿಸಿದರು.
ಮಾಧ್ಯಮಗಳಿಗೆ ಕೃತಜ್ಞತೆ
ಸಾರ್ವಜನಿಕರು ಜನತಾ ಕರ್ಫೂ ಹಾಗೂ ಲಾಕ್‍ಡೌನ್ ಅವಧಿಯಲ್ಲಿಸರ್ಕಾರದ ನಿರ್ದೇಶನಗಳನ್ನು ಪಾಲಿಸುವಲ್ಲಿ ಹಾಗೂ ಸಾಮಾಜಿಕ ಅಂತರ ಕಾಯ್ದು ಕೊಳ್ಳುವಲ್ಲಿ ಮಾಧ್ಯಮಗಳ ಕೊಡುಗೆ ಅಪಾರ. ರಾಜ್ಯದ ಮೂಲೆ ಮೂಲೆಗೂ ಸಂಚರಿಸಿ ವರದಿ ಮಾಡಿ ಸರ್ಕಾರದ ಗಮನ ಸೆಳೆದ ಮಾಧ್ಯಮಗಳ ಸೇವೆ ಅನನ್ಯ ಎಂದು ಮುಖ್ಯಮಂತ್ರಿ ಮಾಧ್ಯಮಗಳ ಸೇವೆಯನ್ನು ಸ್ಮರಿಸಿದರು..
ಇದೇ ಸಂದರ್ಭದಲ್ಲಿ ಕೊರೊನ ವೈರಾಣುರೋಗ ಲಕ್ಷಣ, ಚಿಕಿತ್ಸಾ ಕ್ರಮ, ಕೊರೊನಾ ನಿಯಂತ್ರಣ, ಸರ್ಕಾರ ಕೈಗೊಂಡಿರುವ ಸೌಲಭ್ಯಗಳ ಬಗ್ಗೆ ನಿರಂತರವಾಗಿ ಮಾಧ್ಯಮ ಸ್ನೇಹಿತರು ಪ್ರಚಾರ ಮಾಡಿ, ಸಾರ್ವಜನಿಕರಲ್ಲಿ ಅರಿವುಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಾಧ್ಯಮಗಳಿಗೆ ಕೃತಜ್ಞತೆ ಸಲ್ಲಿಸಿದ ಯಡಿಯೂರಪ್ಪ ಕೋವಿಡ್ – 19 ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ತುಂಬು ಸಹಕಾರ ನೀಡಿದ ಎಲ್ಲಾ ಮಾಧ್ಯಮ ಪ್ರತಿನಿಧಿಗಳಿಗೆ ಪ್ರೀತಿಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.