ಬೆಂಗಳೂರು: ಇಂದು ರಾಜ್ಯದಲ್ಲಿ ಹೊಸದಾಗಿ 24 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 589ಕ್ಕೆ ಏರಿಕೆಯಾಗಿದೆ. ಇವುಗಳಲ್ಲಿ 22 ಜನರು ಮೃತಪಟ್ಟಿದ್ದು, 251 ಜನರು ರೋಗದಿಂದ ಮುಕ್ತಗೊಂಡು ಮನೆಗೆ ಮರಳಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 8 ಪ್ರಕರಣಗಳು ಪತ್ತೆಯಾಗಿದ್ದು, ಮಂಡ್ಯ ನಗರದಲ್ಲಿ ಮೂರು, ಕೆ.ಆರ್.ಪೇಟೆಯಲ್ಲಿ ಒಂದು ಮತ್ತು ಮಳವಳ್ಳಿಯಲ್ಲಿ ನಾಲ್ಕು ಪ್ರಕರಣಗಳು ಪತ್ತೆಯಾಗಿದೆ.
ಇನ್ನು ದಾವಣಗೆರೆಯಲ್ಲಿ ಆರು, ಬೆಳಗಾವಿಯ ರಾಯಭಾಗ್ನಲ್ಲಿ ಮೂರು, ಚಿಕ್ಕಬಳ್ಳಾಪುರದಲ್ಲಿ1, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು, ವಿಜಯಪುರ ಒಂದು, ಕಲಬುರಗಿ ಎರಡು, ಹುಬ್ಬಳ್ಳಿಯಲ್ಲಿ ಒಂದು ಹೊಸ ಸೋಂಕಿತರು ಪತ್ತೆಯಾಗಿದ್ದು, ಇಂದು ರಾಜ್ಯದಲ್ಲಿ ಒಟ್ಟಾರೆ 589 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 251 ಮಂದಿ ಗುಣಮುಖರಾಗಿದ್ದಾರೆ. ಇನ್ನು 316 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ 22 ಮಂದಿ ಮೃತಪಟ್ಟಿದ್ದಾರೆ. ಆದರೆ ಮಂಡ್ಯದಲ್ಲಿ ಎಂಟು ಹೊಸ ಪ್ರಕರಣಗಳು ಪತ್ತೆಯಾಗುವ ಮೂಲಕ ತನ್ನ ರುದ್ರನರ್ತನವನ್ನು ಕೊರೊನಾ ವೈರಸ್ ಮುಂದುವರಿಸಿದೆ. ಈ ನಡುವೆ ಮೈಸೂರಿನಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ.
ಆದರೆ ಗ್ರೀನ್ ಜೋನ್ನಲ್ಲಿದ್ದ ದಾವಣಗೆರೆಯಲ್ಲಿ ಈವರೆಗೆ 10 ಸೋಂಕಿತರು ಪತ್ತೆಯಾಗಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಗ್ರೀನ್ಜೋನ್ ಪಟ್ಟದಿಂದ ರೆಡ್ಜೋನ್ನತ್ತ ಜಿಲ್ಲೆಯೂ ದಾಪುಗಾಲಿಡುತ್ತಿರುವುದು ಜಿಲ್ಲೆಯ ನಿವಾಸಿಗಳ ನಿದ್ದೆಗೆಡಿಸಿದೆ.
ದೇಶದಲ್ಲಿ 35,056 ಕ್ಕೇರಿದ ಸೋಂಕಿತರ ಸಂಖ್ಯೆ
ಇನ್ನು ದೇಶದಲ್ಲಿ ಈವರೆಗೆ 35,056 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. 1,154 ಮಂದಿ ಮೃತಪಟ್ಟಿದ್ದಾರೆ. 9,068 ಮಂದಿ ರೋಗಮುಕ್ತರಾಗಿದ್ದಾರೆ. ಪ್ರಪಂಚಾದ್ಯಂತ ಈವರೆಗೆ 33,10,039 ಜನರಲ್ಲಿ ಸೋಂಕು ಇರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದೆ. ಇನ್ನು 2,34,143 ಜನರು ಮೃತಪಟ್ಟಿದ್ದಾರೆ. 10,43,245 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ.