ಮೈಸೂರು: ಕೈಗಾರಿಕೆಗಳ ಸಮಸ್ಯೆಗಳ ಬಗ್ಗೆ ಸರ್ಕಾರದ ಅರಿವಿದೆ. ಕೈಗಾರಿಕಾ ಸಚಿವರು ನಿಮ್ಮ ಹಲವಾರು ಸಮಸ್ಯೆಗಳ ಬಗ್ಗೆ ಸಂಪುಟದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತಲೇ ಇದ್ದಾರೆ. ಇನ್ನು ನೀವೂ ಸಹ ನಿಮ್ಮ ಸಮಸ್ಯೆಗಳನ್ನು ನನ್ನ ಗಮನಕ್ಕೆ ತನ್ನಿ. ನಾನು ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪರಿಹರಿಸಲು ಯತ್ನಿಸುತ್ತೇನೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಎಫ್ ಕೆಸಿಸಿಐ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಸಚಿವರು, ಸರ್ಕಾರ ತೆಗೆದುಕೊಳ್ಳುವ ನಿರ್ಧಾರದಿಂದ ಇಡೀ ರಾಜ್ಯದ ಕೈಗಾರಿಕೆಗಳಿಗೆ ಅನುಕೂಲವಾಗಬೇಕು. ಈ ನಿಟ್ಟಿನಲ್ಲಿ ಎಲ್ಲರಿಗೂ ಸಹಕಾರಿಯಾಗುವಂತೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಸರ್ಕಾರ, ಮೈಸೂರು ಜಿಲ್ಲಾಡಳಿತ ಹಾಗೂ ಮೈಸೂರು ಉಸ್ತುವಾರಿ ಸಚಿವರು ಕೈಗಾರಿಕೆಗಳ ಪರ ಇರುವುದಾಗಿ ತಿಳಿಸಿದರು.
ಅದೃಷ್ಟವಶಾತ್ ಕರೋನಾ ನಿಯಂತ್ರಣಕ್ಕೆ ಬಂದಿದೆ. ಇದಕ್ಕೆ ಜಿಲ್ಲಾಧಿಕಾರಿ, ಪೆÇಲೀಸ್ ಅಧಿಕಾರಿಗಳು, ವೈದ್ಯರು, ನರ್ಸ್ ಹಾಗೂ ಆಶಾಕಾರ್ಯಕರ್ತೆಯರು ಸಾಕಷ್ಟು ಶ್ರಮ ಹಾಕಿದ್ದಾರೆ. ಅವರ ಈ ಸೇವೆಗೆ ನಾನು ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುವೆ ಎಂದು ತಿಳಿಸಿದರು.
ಕೈಗಾರಿಕಾ ಪ್ರತಿನಿಧಿಗಳ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ಅಭಿರಾಮ್.ಜಿ.ಶಂಕರ್ ಅವರು ಕಾರ್ಖಾನೆಗಳು ನೌಕರರಿಗೆ ನೀಡಿರುವ ಕಂಪನಿಯ ಗುರುತಿನ ಚೀಟಿ ಹೊಂದಿದ್ದರೆ ಪಾಸ್ ಕಡ್ಡಾಯ ಮಾಡುವುದಿಲ್ಲ. ಅಗರಬತ್ತಿ ಮುಂತಾದ ಅಸಂಘಟಿತ ಗೃಹ ಕೈಗಾರಿಕೆಗಳ ಪ್ರತಿನಿಧಿಗಳಿಗೆ ಅಗತ್ಯವಿದ್ದಲ್ಲಿ ಪಾಸ್ ನೀಡಲಾಗುವುದು ಎಂದರು.
ಕಂಪನಿಯಲ್ಲಿ ಕಾರ್ಯನಿರ್ವಹಿಸುವಾಗ ಹವಾ ನಿಯಂತ್ರಣಗಳನ್ನು ಕಡ್ಡಾಯವಾಗಿ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಗಳು ಕೈಗಾರಿಕಾ ಉದ್ಯಮಿಗಳಿಗೆ ಸೂಚನೆ ನೀಡಿದರು.
ನಗರವು ಕೆಂಪು ವಲಯಕ್ಕೆ ಸೇರಿರುವದರಿಂದ ಟ್ಯಾಕ್ಸಿ, ಆಟೋ, ಗೂಡ್ಸ್, ಟೆಂಪೋಗಳ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಸೋಮವಾರದಿಂದ ಟ್ಯಾನ್ಸ್‍ಫೋರ್ಟ್ ಇಂಡಸ್ಟ್ರಿಗಳಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ಮಾರುಕಟ್ಟೆ ಸಂಕಿರಣಗಳನ್ನು ತೆರೆಯುವಂತಿಲ್ಲ ಎಂಬ ಸೂಚನೆ ಇದೆ. ದೇವರಾಜ ಮಾರುಕಟ್ಟೆಯನ್ನು ಹೇಗೆ ಪರಿಗಣಿಸಬೇಕು ಎಂಬ ಸ್ಪಷ್ಟತೆ ಇಲ್ಲ. ಆ ಬಗ್ಗೆ ಒಂದೆರಡು ದಿನದಲ್ಲಿ ತಿಳಿಸಲಾಗುವುದು. ದೇವರಾಜ ಅರಸು ರಸ್ತೆ ಹಾಗೂ ಇತರೆ ಜನಸಂದಣಿ ಸೇರುವ ಅಂಗಡಿಗಳನ್ನು ತೆರೆಯಲು ಸದ್ಯಕ್ಕೆ ಅವಕಾಶ ನೀಡುವುದಿಲ್ಲ. ಈ ಬಗ್ಗೆ ಸ್ಪಷ್ಟನೆ ಪಡೆದು ಕ್ರಮ ವಹಿಸಲಾಗುವುದು ಎಂದರು.