NEWSಉದ್ಯೋಗನಮ್ಮರಾಜ್ಯ

KSRTC ಅಧಿಕಾರಿಗಳು ಕಚೇರಿಗೆ ಬಂದಾಗ ತಮ್ಮ ಹಣ ಎಷ್ಟಿತ್ತು ಹೋಗುವಾಗ ಎಷ್ಟಿದೆ ಅಂತ ತಿಳಿಸಬೇಕು: ಎಂಡಿ ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯ ಸರ್ಕಾರವು ಕಚೇರಿಗಳಲ್ಲಿ ನಗದು ಘೋಷಣೆ ವಹಿ ನಿರ್ವಹಣೆ ಕುರಿತು ವಿವರವಾಗಿ ಮಾರ್ಗಸೂಚಿಗಳನ್ನು ನೀಡಿ, ನಿಗಮ/ ಮಂಡಳಿಗಳಲ್ಲಿ ಸಹ ನಗದು ಘೋಷಣೆ ವಹಿ ನಿರ್ವಹಣೆ ಮಾಡುವಂತೆ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಎಲ್ಲ ಹಂತದ ಕಚೇರಿಗಳಲ್ಲಿ ನಗದು ಘೋಷಣೆ ವಹಿ ನಿರ್ವಹಣೆ ಮಾಡಲು ಕೂಡಲೆ ಕ್ರಮ ವಹಿಸಬೇಕು ಎಂದು ಎಂಡಿ ಅಕ್ರಮ್‌ ಪಾಷ ಆದೇಶ ಹೊರಡಿಸಿದ್ದಾರೆ.

ಕ್ರಮ ವಹಿಸಬೇಕಿರುವುದು: 1. ಅಧಿಕಾರಿ/ ನೌಕರರು ಕರ್ತವ್ಯಕ್ಕೆ ಹಾಜರಾದ ತಕ್ಷಣ ಹಾಗೂ ಕಚೇರಿಯಿಂದ ನಿರ್ಗಮಿಸುವಾಗ ಕಚೇರಿಗೆ ತಂದ ನಗದು ಮೊತ್ತವನ್ನು ನಗದು ಘೋಷಣೆ ವಹಿಯಲ್ಲಿ ತನ್ನ ಸಹಿಯೊಂದಿಗೆ ಘೋಷಿಸತಕ್ಕದ್ದು.

2. ನಗದು ಘೋಷಣೆ ವಹಿಯು ಸಂಬಂಧಪಟ್ಟ ವಿಭಾಗ/ ಶಾಖೆಯ ಅಧಿಕಾರಿಯ ವಶದಲ್ಲಿರತಕ್ಕದ್ದು ಮತ್ತು ಈ ಅಧಿಕಾರಿಯು ನೌಕರನು ಮಾಡಿದ ನಮೂದುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಅಧಿಕಾರವನ್ನು ಹೊಂದಿದ್ದಾರೆ.

3. ಯಾವುದೇ ಅಧಿಕಾರಿ/ ನೌಕರನು ನಗದು ಘೋಷಿಸಿದ್ದಕ್ಕಿಂತ ಹೆಚ್ಚಿನ ಹಣವನ್ನು ಹೊಂದಿರುವುದು ಕಂಡುಬಂದರೆ, ಅಂತಹ ಹೆಚ್ಚುವರಿ ಹಣವನ್ನು ಅಕ್ರಮ ಸಂಪಾದನೆ ಎಂದು ಅರ್ಥೈಸಲಾಗುತ್ತದೆ ಹಾಗೂ ಅಂತಹ ಹೆಚ್ಚುವರಿ ಹಣವನ್ನು ಸಕ್ರಮ ಹಣ ಎಂದು ಸಾಬೀತುಪಡಿಸುವುದು ಅಧಿಕಾರಿ/ ನೌಕರನ ಹೊಣೆಯಾಗಿರುತ್ತದೆ.

4. ನಗದು ಘೋಷಣೆ ವಹಿಯನ್ನು ಕಚೇರಿಯ ವೇಳೆಯ ಎಲ್ಲ ಸಮಯದಲ್ಲಿ ಯಾವುದೇ ಉನ್ನತ ಇಲಾಖಾ ಮುಖ್ಯಸ್ಥರ/ ಸಕ್ಷಮ ಪ್ರಾಧಿಕಾರ/ ವಿಭಾಗ ಮುಖ್ಯಸ್ಥರ/ ಘಟಕದ ಮುಖ್ಯಸ್ಥರ ತಪಾಸಣೆಗಾಗಿ ತೆರೆದಿರಬೇಕು ಎಂದು ತಿಳಿಸಿದ್ದಾರೆ.

ಇನ್ನು ನಿಗಮದ ಮಟ್ಟದಲ್ಲಿ ನಗದು ಘೋಷಣೆ ವಹಿ ನಿರ್ವಹಣೆಯ ಮೇಲ್ವಿಚಾರಣೆ ಮಾಡಲು ಉಪ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ (ಸಿಬ್ಬಂದಿ) ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಹೀಗಾಗಿ ಸಂಬಂಧಪಟ್ಟವರೆಲ್ಲರೂ ಈ ಆದೇಶವನ್ನು ಮನದಟ್ಟು ಮಾಡಿಕೊಂಡು ಅದರಂತೆ ಕ್ರಮ ಕೈಗೊಳ್ಳತಕ್ಕದ್ದು. ಅಲ್ಲದೆ ಈ ಸುತ್ತೋಲೆಯು ತಕ್ಷಣದಿಂದ ಜಾರಿಗೆ ಬರುತ್ತದೆ ಎಂದು ತಿಳಿಸಿದ್ದಾರೆ. ಆದೇಶ ಪ್ರತಿ 1738 Cash Declaration

Megha
the authorMegha

Leave a Reply

error: Content is protected !!