NEWSನಮ್ಮಜಿಲ್ಲೆಬೆಂಗಳೂರು

ಪಾದಚಾರಿ ಮಾರ್ಗ ಒತ್ತುವರಿ, ಅನಧಿಕೃತ ಜಾಹೀರಾತು ತೆರವು: ಆಯುಕ್ತ ಸತೀಶ್

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬಿಬಿಎಂಪಿ ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ, ಅನಧಿಕೃತ ಜಾಹೀರಾತು ತೆರವು ಕಾರ್ಯಾಚರಣೆ ಹಾಗೂ ಸ್ವಚ್ಛತಾ ಅಭಿಯಾನ ನಡೆಸಲಾಯಿತು.

ಪಾಲಿಕೆ ವ್ಯಾಪ್ತಿಯ ರಾಜರಾಜೇಶ್ವರಿನಗರ ವಲಯದಲ್ಲಿ ಇಂದು ವಲಯ ಆಯುಕ್ತ ಬಿ.ಸಿ.ಸತೀಶ್ ಹಾಗೂ ವಲಯ ಜಂಟಿ ಆಯುಕ್ತರಾದ ಆರತಿ ಆನಂದ್ ಅವರ ನೇತೃತ್ವದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ, ಅನಧಿಕೃತ ಜಾಹೀರಾತು ತೆರವು ಕಾರ್ಯಾಚರಣೆ ಹಾಗೂ ಸ್ವಚ್ಛತಾ ಅಭಿಯಾನವನ್ನು ನಡೆಸಲಾಯಿತು.

ರಾಜರಾಜೇಶ್ವರಿನಗರ ವಲಯದ ಕೆಂಗೇರಿ ವಿಭಾಗದ ವ್ಯಾಪ್ತಿಗೆ ಒಳಪಡುವ ಮುದ್ದಿನಪಾಳ್ಯ ವೃತ್ತದಿಂದ ದ್ವಾರಕವಾಸ ರಸ್ತೆ ರತ್ನನಗರದವರೆಗೆ ಹಾಗೂ ರಾಜರಾಜೇಶ್ವರಿನಗರ ವಿಭಾಗದ ವ್ಯಾಪ್ತಿಯ ಜಯಣ್ಣ ವೃತ್ತದಿಂದ ಕೆಂಪೇಗೌಡ ಡಬ್ಬಲ್ ರಸ್ತೆವರೆಗೆ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ, ಅನಧಿಕೃತ ಜಾಹೀರಾತು ತೆರವು ಕಾರ್ಯಾಚರಣೆ ಹಾಗೂ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಯಿತು ಎಂದು ವಲಯ ಆಯುಕ್ತ ಸತೀಶ್ ತಿಳಿಸಿದರು.

ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ಅಂಗಡಿ ಮುಂಗಟ್ಟು ಮತ್ತು ವಾಣಿಜ್ಯ ಮಳಿಗೆಗಳ ಮುಂಭಾಗದಲ್ಲಿ ನಿರ್ಮಿಸಿಕೊಂಡಿದ್ದ ತಾತ್ಕಾಲಿಕ ಮೇಲ್ಛಾವಣಿಗಳು ಹಾಗೂ ಮೆಟ್ಟಿಲುಗಳು, ಬೀದಿ ಬದಿ ವ್ಯಾಪಾರಿಗಳು ನಿರ್ಮಿಸಿಕೊಂಡಿದ್ದ ತಗಡಿನ ಡಬ್ಬದ ಅಂಗಡಿಗಳು, ತಾತ್ಕಾಲಿಕ ಶೆಡ್ ಗಳು, ತಡೆಗೋಡೆಗಳು, ನಂದಿನಿ ಬೂತ್ ಹಾಗೂ ಕಟ್ಟಡ ನಿರ್ಮಾಣದ ಸಾಮಗ್ರಿಗಳನ್ನು ತೆರವುಗೊಳಿಸುವ ಮೂಲಕ ಪಾದಚಾರಿಗಳಿಗೆ ಅಡೆತಡೆಗಳಿಲ್ಲದ ಪಾದಚಾರಿ ಮಾರ್ಗ ಕಲ್ಪಿಸಲು ಕ್ರಮ ತೆಗದುಕೊಳ್ಳಲಾಯಿತು.

ಅನಧಿಕೃತ ಜಾಹೀರಾತು ತೆರವು ಕಾರ್ಯಾಚರಣೆ : ಕಾರ್ಯಚರಣೆಗೆ ಕೈಗೊಳ್ಳಲಾದ ರಸ್ತೆಯ ಎರಡು ಬದಿಗಳಲ್ಲಿ ಹಾಗೂ ಪಾದಚಾರಿ ಮಾರ್ಗದಲ್ಲಿ ಅಳವಡಿಸಿದ್ದ ಅನಧಿಕೃತ ಜಾಹೀರಾತು ಫಲಕಗಳು, ಬ್ಯಾನರ್ ಗಳು ಹಾಗೂ ಬಂಟಿಂಗ್ಸ್ ಗಳನ್ನು ತೆರವುಗೊಳಿಸುವ ಮೂಲಕ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ತೆಗದುಕೊಳ್ಳಲು ಅಧಿಕಾರಿಗಳಿಗೆ ವಲಯ ಆಯುಕ್ತರು ಸೂಚಿಸಿದರು.

ಸ್ವಚ್ಛತಾ ಅಭಿಯಾನ: ಕಾರ್ಯಾಚರಣೆ ಕೈಗೊಳ್ಳಲಾದ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸುವ ಮೂಲಕ ರಸ್ತೆ ಬದಿಗಳಲ್ಲಿ ಬ್ಲಾಕ್ ಸ್ಪಾಟ್ ಆಗದಂತೆ ನಿರಂತರವಾಗಿ ತಪಾಸಣೆ ಮಾಡಿ, ಕಸ ಎಸೆಯುವವರ ಮೇಲೆ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಏಕ ಬಳಕೆ ಪ್ಲಾಸ್ಟಿಕ್ ತಪಾಸಣೆ: ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆಯೊಂದಿಗೆ ವಿವಿಧ ಅಂಗಡಿ ಹಾಗೂ ಮಳಿಗೆಗಳಿಗೆ ಭೇಟಿ ನೀಡಿ ಏಕ ಬಳಕೆ ಪ್ಲಾಸ್ಟಿಕ್ ಬಳಸುತ್ತಿರುವ ಬಗ್ಗೆ ತಪಾಸಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಬಳಸುತ್ತಿದ ಅನೇಕ ಮಳಿಗೆಗಳಿಂದ ರೂ.84,700/-ಗಳ ದಂಡದ ಮೊತ್ತವನ್ನು ವಸೂಲಾತಿ ಮಾಡಿ, ಮಳಿಗೆಗಳ ಮಾಲೀಕರಿಗೆ ಎಚ್ಚರಿಕೆ ನೀಡಲಾಯಿತು.

ಇದೇ ಜುಲೈ 25 ರಂದು ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ ಕೆಂಗೇರಿ ವಿಭಾಗದ 1ನೇ ‘ಡಿ’ ಮುಖ್ಯರಸ್ತೆಯಿಂದ (ಹೊಯ್ಸಳ ವೃತ್ತದ ಹತ್ತಿರ) 1ನೇ ಮುಖ್ಯರಸ್ತೆ ಕೆಂಗೇರಿ ಉಪನಗರ (ಫುಡ್ ಪ್ಯಾಲೆಸ್) ಮತ್ತು 8 ನೇ ಅಡ್ಡರಸ್ತೆ, 1ನೇ ‘ಡಿ’ ಮುಖ್ಯರಸ್ತೆಯಿಂದ 1ನೇ ಮುಖ್ಯರಸ್ತೆ ಕೆಂಗೇರಿ ಉಪನಗರದವರೆಗೆ

ರಾಜರಾಜೇಶ್ವರಿನಗರ ವಿಭಾಗದ ಜಯಣ್ಣ ವೃತ್ತದಿಂದ ಕೆಂಪೇಗೌಡ ಡಬ್ಬಲ್ ರಸ್ತೆವರೆಗೆ ಮತ್ತು ಕೆಂಪೇಗೌಡ ಡಬ್ಬಲ್ ರಸ್ತೆಯಿಂದ ಚನ್ನಸಂದ್ರ ಮುಖ್ಯ ರಸ್ತೆವರೆಗೆ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಲಿದೆ ಎಂದು ವಲಯ ಆಯುಕ್ತ ಸತೀಶ್ ತಿಳಿಸಿದರು.

ಇಂದು ನಡೆದ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ, ಅನಧಿಕೃತ ಜಾಹೀರಾತು ತೆರವು ಕಾರ್ಯಾಚರಣೆ ಹಾಗೂ ಸ್ವಚ್ಛತಾ ಅಭಿಯಾನದಲ್ಲಿ ಮುಖ್ಯ ಅಭಿಯಂತರರು, ಆರೋಗ್ಯಾಧಿಕಾರಿ, ಕಾರ್ಯಪಾಲಕ ಅಭಿಯಂತರರು, ಆರೋಗ್ಯ ವೈದ್ಯಾಧಿಕಾರಿ, ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಪಾಲಿಕೆಯ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು.

Megha
the authorMegha

Leave a Reply

error: Content is protected !!