ಬೆಂಗಳೂರು: ಇಂದು ವಿಶ್ವಪರಿಸರ ದಿನವನ್ನು ಸಮಸ್ತ ಕನ್ನಡಿಗರು ಸೇರಿ ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಡಿನ ಗಣ್ಯರು ಶುಭಾಶಯವನ್ನು ಕೋರಿದ್ದಾರೆ.
ಅದರಲ್ಲಿ ಪ್ರಮುಖವಾಗಿ ಮಾಜಿ ಪ್ರಧಾನ ಮತ್ರಿ ಎಚ್.ಡಿ. ದೇವೇಗೌಡರು, ಸಮಸ್ತರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡುವುದು ನಮ್ಮ ಕರ್ತವ್ಯ ವಾಗಿದೆ. ನಮ್ಮ ಮುಂದಿನ ಪೀಳಿಗೆಯವರಿಗೂ ಉತ್ತಮ ಪರಿಸರವನ್ನು ಉಳಿಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಅದನ್ನು ಮರೆಯದೆ ಪಾಲಿಸಿಕೊಂಡು ಹೋಗೋಣ ಎಂದು ತಿಳಿಸಿದ್ದಾರೆ.
ಕೂಡಿ ಬದುಕಿದರೆ ಸ್ವರ್ಗ, ಕೆಡವಿ ಬದುಕಿದರೆ ನರಕ
ಇನ್ನು ಪರಿಸರ ಎಂದರೆ ಮನುಷ್ಯನೊಬ್ಬನೇ ಅಲ್ಲ, ಮಣ್ಣು,ಗಾಳಿ,ಮರ,ನದಿ, ಗುಡ್ಡ, ಪ್ರಾಣಿ,ಪಕ್ಷಿ ಹುಳು-ಹುಪ್ಪಟೆಯಾದಿಯಾಗಿ ಸಕಲ ಜೀವಾತ್ಮಗಳು ಸೇರಿಕೊಂಡಿರುವ ಕೂಡು ಕುಟುಂಬ. ಕೂಡಿ ಬದುಕಿದರೆ ಸ್ವರ್ಗ, ಕೆಡವಿ ಬದುಕಿದರೆ ನರಕ. ನಾಡಿನ ಸಮಸ್ತ ಜನತೆಗೆ ಪರಿಸರದ ದಿನಾಚರಣೆಯ ಶುಭಾಶಯಗಳು ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಕೋರಿದ್ದಾರೆ.
ಪರಿಸರದೊಂದಿಗೆ ಸಮತೋಲನ, ಸಾಮರಸ್ಯ ಅತಿಮುಖ್ಯ
ಎಲ್ಲರಿಗೂ ವಿಶ್ವ ಪರಿಸರ ದಿನದ ಹಾರ್ದಿಕ ಶುಭಾಶಯಗಳು. ಪರಿಸರವನ್ನು ನಾವು ರಕ್ಷಿಸಿದಾಗ ಮಾತ್ರ ಪರಿಸರ ನಮ್ಮನ್ನು ರಕ್ಷಿಸುತ್ತದೆ. ಪರಿಸರದೊಂದಿಗೆ ಸಮತೋಲನ, ಸಾಮರಸ್ಯ ಕಾಯ್ದುಕೊಳ್ಳುವುದು ಅತಿಮುಖ್ಯ. ಇದು ನಮ್ಮ ಕರ್ತವ್ಯ ಮಾತ್ರವಲ್ಲ, ನಮ್ಮ ಮುಂದಿನ ಪೀಳಿಗೆಯವರಿಗೆ ನಾವು ನೀಡಲೇಬೇಕಾದ ಬಳುವಳಿ. ಪರಿಸರವನ್ನು ಉಳಿಸೋಣ, ಹಸಿರನ್ನು ಬೆಳೆಸೋಣ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕರೆ ನೀಡಿದ್ದಾರೆ.
ತಾಯಿಯಂತೆ ಪೂಜಿಸುವುದು ನಮ್ಮ ಕರ್ತವ್ಯ
ಪರಿಸರವನ್ನು ಮಗುವಿನಂತೆ ರಕ್ಷಿಸಿ ಉಳಿಸಿ ಬೆಳೆಸಿ ತಾಯಿಯಂತೆ ಪೂಜಿಸುವುದು ನಮ್ಮ ಕರ್ತವ್ಯವಾಗಿದೆ. ಪರಿಸರ ಕಾಳಜಿಯ ಪ್ರಜ್ಞೆಯು ಪ್ರತಿಯೊಬ್ಬರಲ್ಲಿ ಜಾಗೃತವಾಗಬೇಕು. ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.