ಬೆಂಗಳೂರು: ಖಾಸಗಿ ಆಸ್ಪತ್ರೆಗಳು ಇನ್ನು ಮುಂದೆ ಕೊರೊನಾ ರೋಗಿಗೆ ಚಿಕಿತ್ಸೆ ಕೊಡಬೇಕು. ಇದಕ್ಕಾಗಿ ಪ್ರತ್ಯೇಕ ಕೊಠಡಿ ಪ್ರತಿ ಆಸ್ಪತ್ರೆಯಲ್ಲಿ ಮೀಸಲಿಡಬೇಕು ಎಂದು ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಸೂಚನೆ ನೀಡಿದೆ.
ಮಂಗಳವಾರ ವೈದ್ಯಕೀಯ ಸಚಿವ ಸುಧಾಕರ್ ರಾಜ್ಯದಲ್ಲಿ ದಿನೇದಿನೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ನಿಯಂತ್ರಣಕ್ಕೆ ಯಾವರೀತಿ ಕ್ರಮ ತೆಗೆದಕೊಳ್ಳಬೇಕು ಎಂಬ ಬಗ್ಗೆ ಚರ್ಚಿಸಿದರು.
ಸಭೆಯಲ್ಲಿ ಡೆಲಿವರಿ ಬಾಯ್ಸ್, ರೈಲ್ವೆ ನಿಲ್ದಾಣದ ಕೂಲಿಗಳು, ಬೀದಿ ಬದಿಯ ವ್ಯಾಪಾರಿಗಳು, ಪೌರ ಕಾರ್ಮಿಕರು ಹಾಗೂ ಸ್ಲಂ ನಿವಾಸಿಗಳು ಸೇರಿ ಜನಸಂದಣಿ ಇರೋ ಕಡೆ ಹೆಚ್ಚು ಟೆಸ್ಟ್ ಮಾಡಲು ನಿರ್ಧಾರ ಮಾಡಲಾಯಿತು.
ರೋಗದ ಲಕ್ಷಣ ಇಲ್ಲದವರಿಗೆ ಆಯಾ ಸೆಂಟರ್ (ಕೋವಿಡ್ ಕೇರ್ ಸೆಂಟರ್) ನಲ್ಲಿ ಚಿಕಿತ್ಸೆ ನೀಡಲು ತೀರ್ಮಾನ ಮಾಡಲಾಗಿದೆ. ಸ್ಟೇಡಿಯಂ, ಸಮುದಾಯ ಭವನಗಳು, ಮೆಡಿಕಲ್ ಕಾಲೇಜುಗಳನ್ನು ಸೆಂಟರ್ ಗಳಾಗಿ ಪರಿವರ್ತನೆ ಮಾಡುವುದು ಹಾಗೂ 20 ಸಾವಿರ ಬೆಡ್ ಸಿದ್ಧತೆಗೆ ಸೂಚನೆ ನೀಡಲಾಯಿತು.
ಖಾಸಗಿ ಆಸ್ಪತ್ರೆಯಲ್ಲಿ ಕೊಡುವ ಚಿಕಿತ್ಸೆಗೆ ದರ ನಿಗದಿ ಮಾಡಲಾಗುವುದು. ಈ ಬಗ್ಗೆ ಮಾರ್ಗಸೂಚಿ ರೆಡಿ ಆಗ್ತಿದೆ. ನಾಡಿದ್ದು ಟಾಸ್ಕ್ ಫೋರ್ಸ್ ಕಮಿಟಿ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಂಡು ದರವನ್ನು ತಿಳಿಸಲಾಗುವುದು ಎಂದು ಸಚಿವರು ಹೇಳಿದರು.
ತಜ್ಞರ ಸಮಿತಿ ರಚಿಸಿ ಆಸ್ಪತ್ರೆಗಲ್ಲಿ ವೆಂಟಿಲೇಟರ್, ವಾರ್ಡ್ ಲಭ್ಯತೆ ಸೇರಿ ಇತರ ಸಿದ್ಧತೆ ಬಗ್ಗೆ ಕ್ರಮ, ಯಾವ ರೋಗಿಗೆ ಎಲ್ಲಿ ಚಿಕಿತ್ಸೆ ಕೊಡಬೇಕು ಎಂಬ ಇದು ವರದಿ ನೀಡಲಿದೆ. ವಿಷಮ ಶೀತ ಜ್ವರ ಕೇಸ್(50 ವರ್ಷ ಮೇಲ್ಪಟ್ಟವರಿಗೆ) ಕಡ್ಡಾಯ ಟೆಸ್ಟ್ ಮಾಡಬೇಕು. ಉಸಿರಾಟದ ಕೇಸ್ ಶೇ.100 ಟೆಸ್ಟ್ ಆಗಬೇಕು. ಉಳಿದ ವರ್ಗದ ಜನರಿಗೆ ಲಕ್ಷಣಗಳಿಗೆ ಅನುಗುಣವಾಗಿ ಪರೀಕ್ಷೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಕೊರೊನಾ ಸೋಂಕನ್ನು ಎದುರಿಸಲು ರಾಜ್ಯದಲ್ಲಿರುವ 41 ಸರ್ಕಾರಿ ಹಾಗೂ 31 ಖಾಸಗಿ ಪ್ರಯೋಗಾಲಯಗಳ ಮೂಲಕ ಪ್ರತಿ ನಿತ್ಯ ಕನಿಷ್ಠ 15,000ದಿಂದ ಗರಿಷ್ಠ 25,000 ವೈಯಕ್ತಿಕ ಕೊವಿಡ್ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಕೊರೊನಾ ಚಿಕಿತ್ಸೆಯನ್ನು ನೀಡುವಂತೆ ನಿರ್ದೇಶಿಸಲು ಸರ್ಕಾರ ನಿರ್ಧರಿಸಿದೆ.
l ಡಾ.ಕೆ. ಸುಧಾಕರ್ ವೈದ್ಯಕೀಯ ಶಿಕ್ಷಣ ಸಚಿವ