ನ್ಯೂಡೆಲ್ಲಿ: ಮೇಡ್ ಇನ್ ಚೀನಾ ಎನಿಸಿರುವ ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸುವಲ್ಲಿ ಜಗತ್ತೇ ಹಿನ್ನಡೆ ಅನುಭವಿಸಿದೆ. ಹೀಗಾಗಿ ಕಳೆದ 24 ಗಂಟೆಗಳಲ್ಲಿ ವಿಶ್ವದಲ್ಲೇ ಅತಿಹೆಚ್ಚು ಸೋಂಕಿತ ಪ್ರಕರಣಗಳು ಭಾನುವಾರ ಪತ್ತೆಯಾಗಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
ಭಾನುವಾರ ಒಂದೇ ದಿನ ವಿಶ್ವದಲ್ಲಿ 1,83,000 ಮಂದಿಗೆ ಕೊರೊನಾವೈರಸ್ ಸೋಂಕು ದೃಢಪಟ್ಟಿದೆ. ಬ್ರೆಜಿಲ್ ವೊಂದರಲ್ಲೇ 54,771 ಜನರಿಗೆ ಕೊವಿಡ್-19 ಕನ್ಫರ್ಮ್ ಆಗಿದೆ. ಇನ್ನು, ಅಮೆರಿಕಾದಲ್ಲಿ 36,617 ಜನರಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದೆ. ಜಾಗತಿಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತದಲ್ಲಿ ಒಂದೇ ದಿನ 15,413 ಮಂದಿಗೆ ಕೊರೊನಾ ಆವರಿಸಿಕೊಂಡಿದೆ.
24 ಗಂಟೆಗಳಲ್ಲೇ ವಿಶ್ವದಲ್ಲಿ 1,83,020 ಜನರಿಗೆ ಕೊರೊನಾವರೈಸ್ ಸೋಂಕು ತಗುಲಿದ್ದು, 4743 ಜನರು ಬಲಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 90,45,604ಕ್ಕೆ ಏರಿಕೆಯಾಗಿದ್ದು, ಇದುವರೆಗೂ ಮಹಾಮಾರಿಗೆ 4,70,698 ಜನರು ಬಲಿಯಾಗಿದ್ದಾರೆ.
ಒಟ್ಟು ಸಾವಿನ ಪ್ರಮಾಣದಲ್ಲಿ ಮೂರರ ಎರಡಷ್ಟು ಸಾವು ಅಮೆರಿಕಾ ಒಂದರಲ್ಲೇ ಸಂಭವಿಸಿದೆ. ಸ್ಪೇನ್ ನಲ್ಲಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತ ಅವಕಾಶ ಕೊರೊನಾದಿಂದ ಲಾಕ್ ಡೌನ್ ಆಗಿದ್ದ ಸ್ಪೇನ್ ನಲ್ಲಿ ಪರಿಸ್ಥಿತಿ ತಿಳಿಗೊಂಡಿದೆ.
ಮೂರು ತಿಂಗಳ ಬಳಿಕ ದೇಶದ 47 ಮಿಲಿಯನ್ ಜನತೆಗೆ ಸರ್ಕಾರವು ಸಿಹಿಸುದ್ದಿ ನೀಡಿದೆ. ಮಾ.14ರಿಂದ ಲಾಕ್ ಡೌನ್ ಆಗಿದ್ದ ದೇಶವು ಸಂಚಾರಮುಕ್ತವಾಗಿದೆ. ಇದರ ಜೊತೆಗೆ ಬ್ರಿಟನ್ ನಿಂದ ಆಗಮಿಸುವ ಪ್ರಯಾಣಿಕರಿಗೆ ಹಾಕಿದ್ದ 14 ದಿನಗಳ ದಿಗ್ಬಂಧನವನ್ನು ತೆರವುಗೊಳಿಸಿದೆ.
26 ಯುರೋಪ್ ರಾಷ್ಟ್ರದ ಪ್ರಜೆಗಳು ವೀಸಾ ಇಲ್ಲದೇ ಸಂಚರಿಸಲು ಅನುಮತಿ ನೀಡಿದೆ. ಸ್ಪ್ಯಾನಿಷ್ ನಲ್ಲಿ ಪ್ರಧಾನಮಂತ್ರಿ ಪೆಡ್ರೋ ಸಂಚೇಜ್ ಕೊರೊನಾ ನಿಯಂತ್ರಣಕ್ಕೆ ತೀವ್ರ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡರು. ಮೊದಲ ಹಂತದ ನಂತರದಲ್ಲಿ ಕೊರೊನಾ ಎರಡನೇ ಹಂತವನ್ನು ದೇಶವು ಎದುರಿಸಬೇಕಾಯಿತು.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಲ ಪ್ರದೇಶಗಳಿಗೆ ಶನಿವಾರ ಭೇಟಿನೀಡಿ ದೇಶದಲ್ಲಿ ಈಗಾಗಲೇ ಕೊರೊನಾ ಸೋಂಕಿತರ ಸಂಖ್ಯೆ 25 ಲಕ್ಷದ ಗಡಿ ದಾಟಿದೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಹೀಗಾಗಿ ಪ್ರತಿಯೊಬ್ಬರು ವೈದ್ಯಕೀಯ ತಪಾಸಣೆಗೊಳಗಾಗಬೇಕು ಎಂದು ಮನವಿ ಮಾಡಿದ್ದಾರೆ.
ಅಮೆರಿಕದಲ್ಲಿ 23,56,657ಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ಆವರಿಸಿದ್ದು, ಮಹಾಮಾರಿಗೆ ಈವರೆಗೂ 1,22,247 ಮಂದಿ ಜೀವ ಬಿಟ್ಟಿದ್ದಾರೆ. 9,80,355ಕ್ಕೂ ಅಧಿಕ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಜಾನ್ ಹಾಪ್ ಕಿನ್ಸ್ ಅಂಕಿ-ಅಂಶಗಳು ತಿಳಿಸಿವೆ.
ಭಾರತದಲ್ಲಿ ಭಾನುವಾರ ಒಂದೇ ದಿನ 15,413 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 4,10,461ಕ್ಕೆ ಏರಿಕೆಯಾಗಿದೆ. 1,69,451 ಸೋಂಕಿತರು ಗುಣಮುಖರಾಗಿದ್ದಾರೆ. ಬಾಕಿ ಉಳಿದ 2,27, 756 ಮಂದಿ ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. 13,254ಕ್ಕೂ ಅಧಿಕ ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.