ಬೆಂಗಳೂರು: ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗಿರುವ ಮೂರ್ನಾಲ್ಕು ಸಾವಿರ ರೋಗಿಗಳಿಗೆ ಚಿಕಿತ್ಸೆ ನೀಡಲು ಬೆಡ್ ಗಳಿಲ್ಲ, ವೆಂಟಿಲೇಟರ್ ಗಳ ಕೊರತೆ ಇದೆ. ಇದಕ್ಕೆ ಸ್ವಯಂ ಪ್ರೇರಿತ ಲಾಕ್ ಡೌನ್ ಒಂದೇ ಪರಿಹಾರ ಎಂದು ಸರ್ಕಾರದ ನಡೆಯಿಂದ ಜನರು ಅನುಭವಿಸುತ್ತಿರುವ ಸಮಸ್ಯೆ ಕುರಿತು ನಾಗರಿಕರಿಗೆ ಈ ಸಲಹೆ ನೀಡಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದ ನಿವಾಸಿಗಳೇ, ನೀವು COVID-19 ನಿಂದ ಪಾರಾಗಲು ಈಗ ಉಳಿದಿರುವುದು ಒಂದೇ ದಾರಿ. ಮನೆಯಲ್ಲೇ ಉಳಿದು ನೀವೇ ಸ್ವಯಂ ಘೋಷಿತ ಬಂದ್ ಆಚರಿಸಿ. ಪ್ರಾಣಕ್ಕಿಂತಲೂ ಹಣ ಮುಖ್ಯವಲ್ಲ. ಜೀವ ಇದ್ದರೆ ಹೇಗಾದರೂ ಬದುಕಬಹುದು. ನಿಮ್ಮ ಜೀವ ಜೀವನ ಈಗ ನಿಮ್ಮ ಕೈಯಲ್ಲಿದೆ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಕೂಡ ಇದನ್ನೇ ಪರೋಕ್ಷವಾಗಿ ಹೇಳುತ್ತಿದೆ. ಕೊರೊನಾ ವೈರಸ್ ಸಮೂಹ ಪ್ರಸರಣದ ಈಗಿನ ಸ್ಥಿತಿಯಲ್ಲಿ ಮನೆಯಲ್ಲಿರುವುದೇ ‘ಮನೆ ಮದ್ದು’. ಈ ಸೋಂಕಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸರ್ಕಾರ ನಿಗದಿಪಡಿಸಿರುವುದು ದಿನಕ್ಕೆ 10-15 ಸಾವಿರ ರೂ. ಈ ದರ ಬಡವರಿಗಿರಲಿ, ಮೇಲ್ಮಧ್ಯಮವರ್ಗದವರಿಗೂ ಭರಿಸಲು ಸಾಧ್ಯವಾಗದು ಎಂದು ಸರ್ಕಾರದ ನಡೆಗೆ ಕಿಡಿಕಾರಿದ್ದಾರೆ.
ಒಂದು ಕುಟುಂಬದ ನಾಲ್ಕು ಜನರಿಗೆ ಕೊರೊನಾ ಬಂದರೆ ಖಾಸಗಿ ಆಸ್ಪತ್ರೆಯಲ್ಲಿ 15 ದಿನಗಳ ಚಿಕಿತ್ಸೆಗೆ ಸರ್ಕಾರ ನಿಗದಿಪಡಿಸಿರುವ ದರದ ಪ್ರಕಾರ 5-6 ಲಕ್ಷ ರೂ ಬೇಕು. ಬಡವರು ಮಧ್ಯಮವರ್ಗದವರು ಎಲ್ಲಿಂದ ತರುತ್ತಾರೆ? ಸರ್ಕಾರ ಕೈಚೆಲ್ಲಿ ಕುಳಿತಿರುವಾಗ ನಮ್ಮ ಜೀವ ನಾವೇ ಉಳಿಸಿಕೊಳ್ಳಬೇಕು. ದಯಮಾಡಿ ಎಚ್ಚರದಿಂದಿರಿ. ಇದು ನನ್ನ ಕಳಕಳಿಯ ಮನವಿ ಎಂದು ನಾಗರಿಕರಲ್ಲಿ ಕೇಳಿಕೊಂಡಿದ್ದಾರೆ.