ಬೆಂಗಳೂರು: ಮಂಡ್ಯದ ಗಣಿ ಉದ್ಯಮಿ, ಜೆಡಿಎಸ್ ಕಾರ್ಯಕರ್ತ ಎಚ್. ಪಿ. ಮಂಜು ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ರಾಜಕೀಯ ದುರುದ್ದೇಶದಿಂದ ಕಿರುಕುಳ ನೀಡುತ್ತಿದ್ದು ಹಲವು ಮನವಿ ನೀಡಿದರೂ ಇದು ಕೊನೆಗೊಳ್ಳದ ಹಿನ್ನೆಲೆಯಲ್ಲಿ ಜೂನ್ 29 ರಂದು ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ ಮುಂಭಾಗ ಧರಣಿ ನಡೆಸುವುದಾಗಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ.
ದೇವೇಗೌಡ ಅವರು ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದು ಸಚಿವ ನಾರಾಯಣಗೌಡ ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿ ಟಿ.ಜೆ. ಸ್ಟೋನ್ ಕ್ರಷರ್ ಉದ್ಯಮ ನಡೆಯದಂತೆ ನೋಡಿಕೊಳ್ಳುತ್ತಿದ್ದಾರೆ. ನಮ್ಮ ಪಕ್ಷದ ಒಬ್ಬ ಕಾರ್ಯಕರ್ತನಿಗೆ ಇಂತಹ ಅನ್ಯಾಯ ಆಗುವುದನ್ನು ಇನ್ನಷ್ಟು ದಿನ ಸಹಿಸಲು ನಮ್ಮಿಂದ ಸಾಧ್ಯವಿಲ್ಲ. ಹೀಗಾಗಿ ಪಕ್ಷದ ಸಂಸದರು, ಶಾಸಕರು ಹಾಗೂ ಮುಖಂಡರೊಂದಿಗೆ ಧರಣಿ ನಡೆಸಲಿದ್ದೇನೆ ಎಂದು ಹೇಳಿದ್ದಾರೆ
ರಾಜ್ಯ ಉಚ್ಚ ನ್ಯಾಯಾಲಯದ ಆದೇಶ ಹಾಗೂ ಗಣಿ ಇಲಾಖೆ ಅಧಿಕಾರಿಗಳ ಶಿಫಾರಸಿನಂತೆ ಗಣಿ ಉದ್ಯಮ ಪುನರಾರಂಭಿಸಲು ಪರವಾನಗಿ ನೀಡುವಂತೆ ಆದೇಶಿಸುವುದಾಗಿ ನೀವು ನನಗೆ ತಿಳಿಸಿದ್ದೀರಿ ಆದರೆ ಅದಾವುದು ಜಾರಿಗೆ ಬಂದಿಲ್ಲ ಎಂದು ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಈ ಸಂಬಂಧ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ಗಣಿ ಸಚಿವ ಸಿ.ಸಿ. ಪಾಟೀಲ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ .ಎಂ.ವಿಜಯಭಾಸ್ಕರ್ ಸೇರಿ ಹಲವರೊಂದಿಗೆ ನಾನು ಈ ವಿಚಾರ ಚರ್ಚಿಸಿದ್ದೇನೆ. ಎಲ್ಲರೂ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಗೌಡರು ಧರಣಿ ಹೊರತು ಬೇರೆ ದಾರಿ ಉಳಿದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶವನ್ನು ಪತ್ರದ ಮೂಲಕ ರವಾನಿಸಿದ್ದಾರೆ.
Olledagli