ಪಾಟ್ನಾ: ಬಿಹಾರದಲ್ಲಿ ಸಿಡಿಲಿನಿಂದಾಗಿ ಪ್ರಾಣ ಕಳೆದುಕೊಂಡ 83 ಮಂದಿಯ ಕುಟುಂಬದವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜೆಡಿಎಸ್ ವರಿಷ್ಠ ದೇವೇಗೌಡ, ಮಾಜಿ ಸಿಎಂ ಎಚ್ಡಿಕೆ, ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ ಗುಡುಗು ಸಹಿತ ಸುರಿದ ಭಾರಿ ಮಳೆ ವೇಳೆ ರಾಜ್ಯದ ವಿವಿಧೆಡೆ 83 ಜನರು ಮೃತಪಟ್ಟಿದ್ದಾರೆ ಎಂದು ಬಿಹಾರ ಮುಖ್ಯಮಂತ್ರಿ ಕಚೇರಿ ಸ್ಪಷ್ಟಪಡಿಸಿದ್ದು, ಸಿಡಿಲಿನ ಅಬ್ಬರಕ್ಕೆ ಕಳೆದ ಎರಡು ದಿನಗಳಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದೆ.
ಬಿಹಾರದ ಗೋಪಾಲ್ಗಂಜ್, ಸಿವಾನ್, ಮಧುಬನಿ, ಮೋತಿಹಾರಿ, ದರ್ಭಂಗದಲ್ಲಿ ಸಿಡಿಲಿಗೆ 83 ಜನರು ಮೃತಪಟ್ಟಿದ್ದು, ಗೋಪಾಲ್ಗಂಜ್ನಲ್ಲಿ 13, ಸಿವಾನ್ನಲ್ಲಿ ಐದು, ಮಧುಬನಿ ಮತ್ತು ಮೋತಿಹರಿಯಲ್ಲಿ ತಲಾ ಇಬ್ಬರು, ದರ್ಬಂಗದಲ್ಲೂ ಒಬ್ಬರು ಬಲಿಯಾಗಿದ್ದಾರೆ.
ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆ ನೀಡುವ ಮಾಹಿತಿ ಪ್ರಕಾರ ಬಿಹಾರದ 23 ಜಿಲ್ಲೆಗಳಲ್ಲಿ ಸಿಡಿಲು ಅಪ್ಪಳಿಸಿದೆ. ಈ ವೇಳೆ 83 ಜನರು ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ. ಅಲ್ಲದೆ ಸಾಕಷ್ಟು ಪ್ರಮಾಣದಲ್ಲಿ ಆಸ್ತಿ-ಪಾಸ್ತಿ ನಷ್ಟ ಉಂಟಾಗಿದೆ.
ಅನೇಕ ಜಿಲ್ಲೆಗಳಲ್ಲಿ 20ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಾಹಿತಿಯ ಪ್ರಕಾರ, ಗೋಪಾಲ್ಗಂಜ್ನಲ್ಲಿ ಮೃತಪಟ್ಟವರೆಲ್ಲರೂ ಬಾರೌಲಿ, ಮಂಜಾ, ವಿಜಯಪುರ, ಉಚ್ಕಾಗಾಂವ್, ಕಟೇಯ ಪ್ರದೇಶದ ನಿವಾಸಿಗಳು.
ಸಿಡಿಲಿನ ಹೊಡೆತಕ್ಕೆ ಸಿಲುಕಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈಗಾಗಲೇ ಚಿಕಿತ್ಸೆ ಮುಂದುವರಿದಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಘಟನೆ ವೇಳೆ ಮನೆ ಹಾಗೂ ತೋಟಗಳಿಗೆ ಹಾನಿ ಉಂಟಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
So sad