ಬೆಂಗಳೂರು: ಕೆಂಪೇಗೌಡ ಬಸ್ ನಿಲ್ದಾಣದಲ್ಲಿ (ಮೆಜೆಸ್ಟಿಕ್) ವೃದ್ಧರೊಬ್ಬರು ಕುಸಿದು ಬಿದ್ದು ನಿತ್ರಾಣಗೊಂಡಿದ್ದರು ಅವರನ್ನು ಆಸ್ಪತ್ರೆಗೆ ಸೇರಿಸಬೇಕು ಎಂದು ಅಲ್ಲಿದ್ದ ಜನರಿಗೆ ಇದ್ದರೂ ಕೊರೊನಾ ಭಯದಿಂದ ಎಲ್ಲರೂ ದೂರದಲ್ಲೇ ನಿಂತು ನೋಡುತ್ತಿದ್ದರು.
ವೃದ್ಧನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. 13ನೇ ಪ್ಲಾಟ್ ಫಾರಂನಲ್ಲಿ ಕುಳಿತಿದ್ದ ವೃದ್ಧ ಏಕಾಏಕಿ ಕುಸಿದು ಬಿದ್ದಿದ್ದ. ಇದನ್ನು ನೋಡಿದ ಪ್ರಯಾಣಿಕರು ಹಾಗೂ ಸಿಬ್ಬಂದಿ ಆತಂಕಕ್ಕೆ ಒಳಗಾಗಿ ದೂರ ಸರಿದು ತಕ್ಷಣವೇ ಅಂಬುಲೆನ್ಸ್ ಗೆ ಆಂಬುಲೆನ್ಸ್‌ಗೆ ಕರೆ ಮಾಡಿದರು.
ಸ್ಥಳಕ್ಕೆ ಬಂದ ಅಂಬುಲೆನ್ಸ್ ಸಿಬ್ಬಂದಿ ಪಿಪಿಇ ಕಿಟ್ ಧರಿಸಿರಲಿಲ್ಲ. ಇದರಿಂದಾಗಿ ತಮಗೂ ಸೋಂಕು ಹಬ್ಬಿದರೆ ಏನು ಮಾಡುವುದು ಎಂಬ ಆತಂಕದಿಂದ ವೃದ್ಧನನ್ನ ಮುಟ್ಟಲು ದೂರದಲ್ಲೇ ನಿಂತರು. ಸುಮಾರು ಒಂದು ಗಂಟೆಯ ಬಳಿಕ ಮತ್ತೊಂದು ಅಂಬುಲೆನ್ಸ್ ಸ್ಥಳಕ್ಕೆ ಆಗಮಿಸಿತು.
ಪಿಪಿಇ ಕಿಟ್ ಧರಿಸಿದ್ದ ವೈದ್ಯಕೀಯ ಸಿಬ್ಬಂದಿ ವೃದ್ಧನನ್ನು ಅಂಬುಲೆನ್ಸ್ ನಲ್ಲಿ ಹಾಕಿ ಆಸ್ಪತ್ರೆಗೆ ಕರೆದೊಯ್ದರು. ಕೊರೊನಾ ಆತಂಕದಲ್ಲಿ ಇರುವ ಜನರಿಗೆ ವೃದ್ಧ ಜ್ವರದಿಂದ ಕುಸಿದು ಬಿದ್ದಿದ್ದು ಮತ್ತಷ್ಟು ಭಯಭೀತರಾಗುವಂತೆ ಮಾಡಿತು.
ಮುಂಜಾಗ್ರತಾ ಕ್ರಮವಾಗಿ ವೃದ್ಧ ಕುಸಿದು ಬಿದ್ದ ಸ್ಥಳದಲ್ಲಿದ್ದ ಅಕ್ಕಪಕ್ಕದ ಅಂಗಡಿಗಳನ್ನು ಬಂದ್ ಮಾಡಲಾಯಿತು. ಇನ್ನು ಸಾನಿಟೈಜರ್ ಸಿಂಪಡಣೆಗೆ ಆರೋಗ್ಯ ಇಲಾಖೆ ಮುಂದಾಗಿದೆ. ವೃದ್ಧನ ಕೋವಿಡ್-19 ಪರೀಕ್ಷೆಯ ವರದಿ ಬರುವವರೆಗೂ ಮೆಜೆಸ್ಟಿಕ್‍ನಲ್ಲಿದ್ದ ಪ್ರಯಾಣಿಕರು ಹಾಗೂ ಮಳಿಗೆಗಳ ಸಿಬ್ಬಂದಿಯನ್ನು ಆತಂಕ ಕಾಡದೆ ಇರದು.