ಬೆಂಗಳೂರು: ಬ್ಲಾಕ್ ಸ್ಪಾಟ್ ಮುಕ್ತ ಪ್ರದೇಶವನ್ನಾಗಿ ಬೆಂಗಳೂರು ಉತ್ತರ ನಗರ ಪಾಲಿಕೆಯನ್ನು ಮಾಡುವ ಹಾಗೂ ಸ್ವಚ್ಛತೆ ಮತ್ತು ಸೌಂದರ್ಯ ಕಾಪಾಡುವ ಉದ್ದೇಶದಿಂದ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ಹೆಬ್ಬಾಳ ವಿಭಾಗ ವ್ಯಾಪ್ತಿಯಲ್ಲಿ ಸಾಮೂಹಿಕ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ವಾರ್ಡ್ ಸಂಖ್ಯೆ 18ರ ಡಾಲರ್ಸ್ ಕಾಲೋನಿ ಪೆಬಲಬೇ ಅಪಾರ್ಟ್ಮೆಂಟ್ ನಿಂದ ಬುಲೆವಾಡ ಪಾರ್ಕ್ ವರೆಗೆ 1.5 ಕಿಲೋಮೀಟರ್ ವ್ಯಾಪ್ತಿಯಲ್ಲಿ ನಡೆದ ಈ ಅಭಿಯಾನದಲ್ಲಿ ಒಟ್ಟು 40 ಪೌರಕಾರ್ಮಿಕರು, 2 ಟ್ರ್ಯಾಕ್ಟರ್‌ಗಳು ಹಾಗೂ ಮೂರು ಆಟೋ ಟಿಪ್ಪರ್ 1 ಕಾಂಪ್ಯಾಕ್ಟರ್ ಬಳಸಿ ಹೂಳು ಮತ್ತು ಕಸ ತೆರವು ಕಾರ್ಯಗಳು ಕೈಗೊಳ್ಳಲಾಯಿತು.
ಅಭಿಯಾನದ ಮೂಲಕ 2.5 ಟನ್ ತ್ಯಾಜ್ಯ ಹಾಗೂ 1.5 ಟನ್ ಕಟ್ಟಡ ಭಗ್ನಾವಶೇಷಗಳು ಸೇರಿ ಒಟ್ಟು 4 ಟನ್ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದೆ. ನಗರದ ಸ್ವಚ್ಛತೆ ಕಾಪಾಡುವ ಸಲುವಾಗಿ ಗೋಡೆಗೆ ಬಣ್ಣ ಹಚ್ಚುವುದರ ಮೂಲಕ ಬ್ಲಾಕ್ ಸ್ಪಾಟ್‌ಗಳ ನಿವಾರಣೆಗೆ ಕ್ರಮ ವಹಿಸಲಾಯಿತು ಎಂದು ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ತಿಳಿಸಿದರು.
ಪ್ರತಿದಿನವೂ ನಗರ ಪಾಲಿಕೆಯ ಸಿಬ್ಬಂದಿ ತಂಡ ಸ್ವಚ್ಛತೆ ಕಾಪಾಡಲು ನಿರಂತರವಾಗಿ ಶ್ರಮಿಸುತ್ತಿದ್ದು, ಸಾರ್ವಜನಿಕರು ಸಹ ಸಿಬ್ಬಂದಿಗಳೊಂದಿಗೆ ಕೈಜೋಡಿಸಬೇಕು ಎಂದು ವಿನಂತಿಸಿದರು.
ಕಾರ್ಯದಲ್ಲಿ ಹೆಬ್ಬಾಳ ವಿಭಾಗದ ಕಾರ್ಯಪಾಲಕ ಅಭಿಯಂತರರು, ಉಪ ಪ್ರದಾನ ವ್ಯವಸ್ಥಾಪಕರು (BSWML), ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಅಭಿಯಂತರರು, ಕಿರಿಯ ಆರೋಗ್ಯ ಪರಿವೀಕ್ಷಕರು, ಪೌರಕಾರ್ಮಿಕರು ಹಾಗೂ ಮೇಲ್ವಿಚಾರಕರು ಸಕ್ರಿಯವಾಗಿ ಪಾಲ್ಗೊಂಡರು.
Related
