ಬೆಂಗಳೂರು: ಕೋವಿಡ್-19 ಸೋಂಕು ತಡೆಯಲು ಸೋಂಕು ನಿವಾರಕ ಸಿಂಪಡಣೆ ಮಾಡುವ “ಮಿಸ್ಟ್ ಕೆನಾನ್” ಯಂತ್ರಕ್ಕೆ ಇಂದು ವಿಧಾನಸೌಧ ಪೂರ್ವ ದ್ವಾರದ ಬಳಿ ಕಂದಾಯ ಸಚಿವರು ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ ಆರ್.ಅಶೋಕ್ ಚಾಲನೆ ನೀಡಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ವ್ಯಾಪಕವಾಗಿ ಸೋಂಕು ನಿವಾರಕ ಸಿಂಪಡಣೆ ಮಾಡುವ ಉದ್ದೇಶದಿಂದ ಇಂದು “ಮಿಸ್ಟ್ ಕೆನಾನ್” ಯಂತ್ರಕ್ಕೆ ಚಾಲನೆ ನೀಡಲಾಗಿದ್ದು, ಈ ಯಂತ್ರವು 8,000 ಲೀಟರ್ ಸಾಮರ್ಥ್ಯ ಹೊಂದಿದ್ದು, 50 ಮೀಟರ್ ದೂರದವರೆಗೆ ಹಾಗೂ 320°(ಡಿಗ್ರಿ) ಸುತ್ತಳತೆಯಲ್ಲಿ ಸೋಂಕು ನಿವಾರಕ ಸಿಂಪಡಣೆ ಮಾಡಬಹುದಾಗಿದೆ ಎಂದು ಅಶೋಕ್ ತಿಳಿಸಿದರು.
ಅಲ್ಲದೆ ರಸ್ತೆ ಮಾರ್ಗದಲ್ಲಿ ಸಮರ್ಪಕವಾಗಿ ಸೋಂಕು ನಿವಾರಕ ಸಿಂಪಡಿಸಲು ಯಂತ್ರದ ಮುಂಭಾಗ ಹಾಗೂ ಎರಡೂ ಬದಿ ಸೇರಿ 17 ಸ್ಪಿಂಕ್ಲರ್ ಗಳನ್ನು ಅಳವಡಿಸಲಾಗಿದೆ. ಮಿಸ್ಟ್ ಕೆನಾನ್ ಯಂತ್ರವು 11 ಕೆ.ವಿ ಸಾಮರ್ಥ್ಯ ಹೊಂದಿದ್ದು, ಅತ್ಯಂತ ವೇಗವಾಗಿ ಸೋಂಕು ನಿವಾರಕ ಸಿಂಪಡಣೆ ಮಾಡಬಹುದಾಗಿದೆ ಎಂದರು.
ಈ ಯಂತ್ರದಲ್ಲಿ ಚಾಲಕ, ಮಿಸ್ಟ್ ಕೆನಾನ್ ಯಂತ್ರದ ಕಂಟ್ರೋಲ್ ಪ್ಯಾನಲ್ ನಿರ್ವಹಣೆ ಮಾಡಲು ಹಾಗೂ ಕಿರಿದಾದ ಸ್ಥಳಗಳಲ್ಲಿ ಸೋಂಕು ಸಿಂಪಡಿಸಲು ಅಳವಡಿಸಿರುವ 30 ಮೀಟರ್ ಉದ್ದದ ಪೈಪ್ ನಿಂದ ಸೋಂಕು ಸಿಂಪಡಿಸಲು 2 ಸಿಬ್ಬಂದಿಯ ಅವಶ್ಯಕತೆ ಇದೆ. ಪ್ರಮುಖವಾಗಿ ಚಾಲಕ ಕೂತಿರುವ ಜಾಗದಿಂದಲೇ ಮಿಸ್ಟ್ ಕೆನಾನ್ ಯಂತ್ರವನ್ನು ನಿರ್ವಹಣೆ ಮಾಡಬಹುದಾದ ರಿಮೋಟ್ ಕಂಟ್ರೋಲ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ ಎಂದು ವಿವರಿಸಿದರು.
ಈ ಯಂತ್ರಕ್ಕೆ ಎಚ್ಚರಿಕೆಯ ಸೈರನ್ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಧ್ವನಿರ್ವಧಕವನ್ನು ಕೂಡಾ ಅಳವಡಿಸಿಕೊಂಡಿದೆ. ಈ ಯಂತ್ರದಿಂದ ವೇಗವಾಗಿ ಸೋಂಕು ನಿವಾರಕ ಸಿಂಪಡೆಣೆ ಮಾಡಬಹುದಾಗಿದ್ದು, 45 ಎಚ್.ಪಿ. ಸಾಮರ್ಥ್ಯದ ಜನರೇಟರ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್, ಮಹಾಪೌರ ಗೌತಮ್ ಕುಮಾರ್, ಉಪಮಹಾಪೌರ ರಾಮಮೋಹನ ರಾಜು, ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ, ಆಯುಕ್ತ ಬಿ.ಎಚ್.ಅನಿಲ್ ಕುಮಾರ್, ವಿಶೇಷ ಅಯುಕ್ತ ಡಿ.ರಂದೀಪ್, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ, ಅಮೇರಿಕನ್ ರೋಡ್ ಟೆಕ್ನಾಲಜಿ ಅಂಡ್ ಸೆಲ್ಯೂಷನ್ಸ್(ARTS)ನ ವ್ಯವಸ್ಥಾಪಕ ನಿರ್ದೇಶಕಿ ಭಾನು ಪ್ರಭ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.