ಬೆಂಗಳೂರು: ತಂದೆ ಪತ್ನಿ ಹಾಗೂ ಪುತ್ರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ಹೋಂ ಕ್ವಾರಂಟೈನ್ ನಲ್ಲಿದ್ದ ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಮಂಗಳವಾರದಿಂದ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಕೊರೊನಾ ಸಂಬಂಧಿಸಿದ ಸಭೆಗೆ ವಿಧಾನಸೌಧದಲ್ಲಿ ಇಂದು ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಪತ್ನಿ, ಪುತ್ರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ನಾನು ಕ್ವಾರಂಟೈನ್ನಲ್ಲಿದೆ. ಆ ವೇಳೆ ಎರಡು ಬಾರಿ ಟೆಸ್ಟಿಂಗ್ ಮಾಡಿಸಿದ್ದು ನನ್ನ ರಿಪೋರ್ಟ್ ನೆಗೆಟಿವ್ ಬಂತು. ಆದರೂ ಕ್ವಾರಂಟೈನ್ ಮುಗಿಸಿದ್ದು ಈಗ ಕರ್ತವ್ಯಕ್ಕೆ ಹಾಜರಾಗುತ್ತಿದ್ದೇನೆ. ಎಲ್ಲರ ಆಶೀರ್ವಾದದಿಂದ ನಾನು ಮತ್ತೆ ಬಂದಿದ್ದೇನೆ ಎಂದರು.
8 ದಿನಗಳ ಹಿಂದೆ ಸಚಿವ ಸುಧಾಕರ್ ಕುಟುಂಬದ ಮೂವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದರು. ಈ ವೇಳೆ ಈ ಮೂವರಿಗೂ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿತ್ತು. ಹೀಗಾಗಿ ಸುಧಾಕರ್ 7 ದಿನಗಳ ಕಾಲ ಸದಾಶಿವನಗರದ ತಮ್ಮ ಮನೆಯಲ್ಲೇ ಕ್ವಾರಂಟೈನ್ ಆಗಿದ್ದರು.
ಮನೆಯಲ್ಲೇ ಉಳಿದಿದ್ದ ಸಚಿವರು ವಿಡಿಯೋ ಕಾನ್ಫರೆನ್ಸ್ ಮೂಲಕ ನಿತ್ಯ ತಮ್ಮ ಇಲಾಖೆಯ ಕಾರ್ಯಗಳ ಬಗ್ಗೆ ಮೇಲುಸ್ತುವಾರಿ ನಡೆಸಿದ್ದರು. ಅಲ್ಲದೆ ಕೊರೊನಾ ತಡೆ ಕುರಿತು ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಸೋಂಕು ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡುತ್ತಿದ್ದರು.