NEWSನಮ್ಮಜಿಲ್ಲೆನಮ್ಮರಾಜ್ಯ

NWKRTC: ಮಹಿಳೆಯರ ಉಚಿತ ಪ್ರಯಾಣದ 900 ಕೋಟಿ ರೂ. ಬಾಕಿ ಉಳಿಸಿಕೊಂಡ ಸರ್ಕಾರ- ಸಂಸ್ಥೆ ಅಧ್ಯಕ್ಷ ರಾಜು ಕಾಗೆ

ವಿಜಯಪಥ ಸಮಗ್ರ ಸುದ್ದಿ

ಬೆಳಗಾವಿ: ಸರ್ಕಾರದ ಶಕ್ತಿ ಯೋಜನೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 900 ಕೋಟಿ ರೂಪಾಯಿ ಬಾಕಿ ಹಣ ಬರಬೇಕಿದೆ ಎಂದು ಸಂಸ್ಥೆ ಅಧ್ಯಕ್ಷ ಹಾಗೂ ಕಾಗವಾಡ ಶಾಸಕ ರಾಜು ಕಾಗೆ ಹೇಳಿದ್ದಾರೆ.

ಜಿಲ್ಲೆಯ ಅಥಣಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾಕಿ ಹಣದ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಸದ್ಯ ನಿಗಮವನ್ನು ನೋ ಪ್ರಾಫಿಟ್, ನೋ ಲಾಸ್ ಸೂತ್ರದಡಿ ಮುನ್ನಡೆಸಿಕೊಂಡು ಹೋಗುವುದಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದರು.

ಈ ಸಂಬಂಧ ನಾನು ನಿಗಮಕ್ಕೆ ಕೊಡಬೇಕಿರುವ ಬಾಕಿ ಹಣ ನೀಡಬೇಕು ಎಂದು ಮುಖ್ಯಮಂತ್ರಿ ಬಳಿ ಮನವಿ ಮಾಡಿದ್ದೇನೆ.‌ ಅವರು ಶೀಘ್ರದಲ್ಲೇ ಬಾಕಿ ಪಾವತಿ ಮಾಡಿದರೆ ಇನ್ನಷ್ಟು ಉತ್ತಮವಾಗಿ ಜನರಿಗೆ ಸಾರಿಗೆ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದರು.

ಇನ್ನು ರಾಜ್ಯದಲ್ಲಿರುವ ನಾಲ್ಕು ಸಾರಿಗೆ ನಿಗಮಗಳ ಪೈಕಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಪ್ರಗತಿಯಲ್ಲಿ ಮೊದಲನೇ ಸಾಲಿನಲ್ಲಿದೆ. ನಾನು ಅಧ್ಯಕ್ಷನಾದ ಬಳಿಕ ನೌಕರರ ವೇತನ ಸೇರಿದಂತೆ ನಿಗಮದಲ್ಲಿ ಸಾಕಷ್ಟು ಜನ‌ಸ್ನೇಹಿ ಬದಲಾವಣೆ ತಂದಿದ್ದೇನೆ ಎಂದು ಹೇಳಿದರು.

ಸಂಸ್ಥೆಗೆ ರಾಣಿ ಚೆನ್ನಮ್ಮ ಸಾರಿಗೆ ಸಂಸ್ಥೆ ಎಂದು ಮರುನಾಮಕರಣ ಮಾಡಲು ಮುಂದಾಗಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಈ ಕುರಿತು ಕಡತ ಸಂಪುಟದ ಮುಂದೆ ಇದೆ. ಆದಷ್ಟು ಬೇಗನೆ ಸರ್ಕಾರ ಇದರ ಬಗ್ಗೆ ಆದೇಶ ಹೊರಡಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡಪರ ಹೋರಾಟಗಾರರ ಮನವಿಯ ಮೇರೆಗೆ ಈ ನಿರ್ಧಾರಕ್ಕೆ ಬರಲಾಗಿದೆ. ರಾಜ್ಯದಲ್ಲಿ ಯಾರೊಬ್ಬರೂ ಇದಕ್ಕೆ ವಿರೋಧ ವ್ಯಕ್ತಪಡಿಸಲಾರರು. ಅತೀ ಶೀಘ್ರದಲ್ಲಿಯೇ ಮರುನಾಮಕರಣ ಮಾಡಲಾಗುವುದು ಎಂದರು.

ಇನ್ನ ನಮ್ಮ ನಿಗಮಕ್ಕೆ ಹೆಚ್ಚುವರಿಯಾಗಿ 700 ಬಸ್ ಖರೀದಿಯ ಪ್ರಸ್ತಾವನೆ ಸಲ್ಲಿಸಲಾಗಿದೆ. ತ್ವರಿತವಾಗಿ ಈ ಬಗ್ಗೆ ಸರ್ಕಾರ ಗಮನ ಹರಿಸಲಿದ್ದು, ಹಂತ ಹಂತವಾಗಿ ಮುಂದಿನ ದಿನಗಳಲ್ಲಿ ಅವಶ್ಯಕತೆ ಇರುವ ಡಿಪೋಗಳಿಗೆ ನೂತನ ಬಸ್ ಹಸ್ತಾಂತರ ಪ್ರಕ್ರಿಯೆ ನಡೆಸುತ್ತೇವೆ ಎಂದರು.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯಲ್ಲಿನ ಡಿಪೋಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡುವ ಚಿಂತನೆ ನಡೆದಿದೆ. ಡಾಂಬರೀಕರಣದ ಬದಲಾಗಿ ಬ‌ಸ್ ಓಡಾಟಕ್ಕೆ ಇದು ಅನುಕೂಲಕರವಾಗಿದೆ ಎಂದು ಅಭಿಪ್ರಾಯಪಟ್ಟರು.

Megha
the authorMegha

Leave a Reply

error: Content is protected !!