ಬೆಂಗಳೂರು: ಕೊರೊನಾ ಸೋಂಕು ಪೀಡಿತರು ಬೆಡ್ ಗಳಿಲ್ಲದೆ, ಚಿಕಿತ್ಸೆ ಇಲ್ಲದೆ ಮನೆಯಲ್ಲೇ ನರಳಿ ಸಾಯುತ್ತಿದ್ದಾರೆ. ಆರಂಭಿಕ ಹಂತದಲ್ಲೇ ಕೋವಿಡ್-19 ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಳೆದ ಮೂರು ತಿಂಗಳಿಂದ ಮುಖ್ಯಮಂತ್ರಿ ಸೇರಿದಂತೆ ಸಚಿವರು ಮಾತಿನ ಮಂಟಪ ಕಟ್ಟುವುದರಲ್ಲಿ ಕಾಲ ಕಳೆದರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಕ್ರೋಶವ್ಯಕ್ತಪಡಿಸಿದ್ದಾರೆ.
ಇಂದು ಸರಣಿ ಟ್ವೀಟ್ ಮಾಡಿರುವ ಅವರು, ಸರ್ಕಾರ ಈಗ ಇಂಗು ತಿಂದ ಮಂಗನಂತಾಗಿದ್ದು, ಸೋಂಕಿತರ ಸಂಖ್ಯೆಯ ಗಣನೀಯ ಏರಿಕೆಯನ್ನು ತಡೆಯಲು ಪೇಚಾಡುತ್ತಿದೆ. ನೆರೆಯ ಕೇರಳ ಸರ್ಕಾರ ಕೊರೊನ ತಡೆಗೆ ಕೈಗೊಂಡ ಕ್ರಮಗಳ ‘ಸಿದ್ದ’ ಮಾದರಿ ಕಣ್ಣೆದುರಿಗಿದೆ. ಆದರೆ, ರಾಜ್ಯದ ಸಚಿವರಲ್ಲಿ ಸಮನ್ವಯವಿಲ್ಲ, ಒಬ್ಬೊಬ್ಬರದು ಒಂದೊಂದು ನಿಲುವು. ಇವರ ತಿಕ್ಕಾಟದಲ್ಲಿ ರಾಜ್ಯದ ಜನತೆ ಹೈರಾಣಾಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಕೊರೊನಾ ಸೋಂಕು ಶರವೇಗದಲ್ಲಿ ಎಲ್ಲೆಡೆ ವ್ಯಾಪಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ರಾಜ್ಯದಾದ್ಯಂತ ಸೋಂಕಿತರು ಚಿಕಿತ್ಸೆಯಿಲ್ಲದೆ ಸಾಯುತ್ತಿರುವ ಘಟನೆಗಳು ಕರುಳು ಹಿಂಡುತ್ತಿವೆ. ಸರ್ಕಾರ ಇನ್ನೂ ಮೈಮರೆತರೆ ಸೋಂಕಿತರು ಬೀದಿ ಬೀದಿಯಲ್ಲಿ ಸಾಯುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ಇನ್ನಾದರೂ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಲಿ. ಕೊರೊನಾ ಸಮರ್ಪಕ ನಿರ್ವಹಣೆಗೆ ನಾನು ಕೊಟ್ಟ ಹತ್ತಾರು ಸಲಹೆಗಳನ್ನು ಲಘುವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಲಿ ಎಂದು ತಿಳಿಸಿದ್ದಾರೆ.
ಸರ್ಕಾರ ಕೇವಲ ಸರ್ವಪಕ್ಷಗಳ ಸಭೆ ಕರೆದರೆ ಸಾಲದು. ಆ ಸಭೆಯಲ್ಲಿ ನೀಡುವ ಸಲಹೆಗಳನ್ನು, ತೆಗೆದುಕೊಂಡ ನಿರ್ಣಯಗಳನ್ನು ಕಾರ್ಯರೂಪಕ್ಕೆ ತರಬೇಕು. ಕಳೆದ 3 ತಿಂಗಳಿನಿಂದ ನಾವು ನೀಡಿರುವ ಒಂದು ಸಲಹೆಯನ್ನೂ ಕಾರ್ಯರೂಪಕ್ಕೆ ತಂದಿಲ್ಲ. ಸರ್ಕಾರದ ಅವ್ಯವಸ್ಥೆಗೆ ಬಡ, ಮಧ್ಯಮ ವರ್ಗದ ಜನರು ಈಗ ಜೀವ ತೆರಬೇಕಾಗಿದೆ ಎಂದು ಕಿಡಿ ಕಾರಿದ್ದಾರೆ.
Anna yakanna helthira janaru bjp bjp antha saythare sayli bidi ade e sandarbadalli bere govt iddidre kugadi bidoru bidi inna meladru buddi kaliro bakthra……