ನ್ಯೂಡೆಲ್ಲಿ: ಮಹಾಮಾರಿ ಕೊರೊನಾ ಸೋಂಕಿನಿಂದ ಉಂಟಾಗಿದ್ದ ಲಾಕ್ ಡೌನ್‌ನಿಂದ ತತ್ತರಿಸಿರುವ ಭಾರತದ ಆರ್ಥಿಕತೆ ಸುಧಾರಣೆಗೆ 50 ರಿಂದ 60 ಲಕ್ಷ ಕೋಟಿ ರೂ. ನೇರ ವಿದೇಶಿ ಬಂಡವಾಳ ಹೂಡಿಕೆಯ ಅಗತ್ಯವಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಗುರುವಾರ ಈ ವಿಷಯ ತಿಳಿಸಿದ ಅವರು, ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ದೇಶದಲ್ಲಿ ಲಾಕ್‌ಡೌನ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಆರ್ಥಿಕ ಚಟುವಟಿಕೆಗಳು ಗಮನಾರ್ಹವಾಗಿ ಅಸ್ತವ್ಯಸ್ತಗೊಂಡಿವೆ ಎಂದು ತಿಳಿಸಿದರು.
ಈ ಹೂಡಿಕೆಯ ಹಣವನ್ನು ಮುಖ್ಯವಾಗಿ ಮೂಲಸೌಕರ್ಯ ಯೋಜನೆಗಳು ಹಾಗೂ ಎಂಎಸ್‌ಎಂಇ ವಲಯದ ಮೂಲಕ ಕೊರೊನಾ ಬಾಧಿತ ಆರ್ಥಿಕತೆಯ ಚಕ್ರಗಳನ್ನು ವೇಗಗೊಳಿಸಲು ಬಳಸಬಹುದು ಎಂದು ತಿಳಿಸಿದರು.
ಈ ಸಮಯದಲ್ಲಿ ದೇಶಕ್ಕೆ ಹಣದ ಹರಿವಿನ ಅಗತ್ಯವಿದೆ. ಆ ಹಣದ ಹರಿವು ಇಲ್ಲದೆ ನಮ್ಮ ಆರ್ಥಿಕತೆಯ ಚಕ್ರಕ್ಕೆ ವೇಗ ಸಿಗುವುದು ಕಷಾಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.