ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರ ಅವಧಿ 5ವರ್ಷ ಪೂರ್ಣಗೊಂಡಿರುವ ಹಿನ್ನೆಲೆ ಕೊರೊನಾ ಸೋಂಕಿನಿಂದ ಗ್ರಾಪಂ ಸದಸ್ಯರ ಆಯ್ಕೆ ಚುನಾವಣೆ ನಡೆಸಲು ಅಸಾಧ್ಯವಾಗಿರುವುದರಿಂದ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳ ನೇಮಿಸುವ ಸರ್ಕಾರದ ನಿರ್ಧಾವನ್ನು ಉಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ.
ಐದು ವರ್ಷಗಳ ಅವಧಿ ಪೂರೈಸಿರುವ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಚಳ್ಳಕೆರೆ ತಾಲೂಕು ಸೋಮಗುದ್ದಿ ಗ್ರಾಪಂ ಅಧ್ಯಕ್ಷ ಸಿ.ಎಲ್.ಸತೀಶ್ ಬಾಬು ಸೇರಿ ಒಟ್ಟು 16 ಜನ ಅರ್ಜಿ ಸಲ್ಲಿಸಿದ್ದರು.
ಆದರೆ, ಈ ಅರ್ಜಿಯ ಮನವಿಯನ್ನು ಪರಿಗಣಿಸಲು ನಿರಾಕರಿಸಿರುವ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯ ಕಲಂ 8ರ ಅನುಸಾರ ಹಲವು ಪಂಚಾಯಿತಿಗಳ ಅವಧಿ ಈಗಾಗಲೇ ಮುಗಿದಿದೆ. ಕಾಯ್ದೆ ಅನುಸಾರ ಒಂದು ಬಾರಿ ಆಡಳಿತಾಧಿಕಾರಿ ನೇಮಕವಾದರೆ ಅವರು ಚುನಾಯಿತ ಪ್ರತಿನಿಧಿಗಳಿಗೆ ಸಮಾನ ಎಂದು ಸ್ಪಷ್ಟನೆ ನೀಡಿದೆ.
ಅಂತೆಯೇ ಪಂಚಾಯಿತಿಗೆ ಚುನಾಯಿತರಾದವರ ಅವಧಿ 5 ವರ್ಷಗಳ ಅವಧಿ ಮುಗಿದ ನಂತರವೂ ಅವರನ್ನು ಮುಂದುವರಿಸುವಂತೆ ಆದೇಶ ನೀಡಲು ಸಂವಿಧಾನದ 243-ಇ ವಿಧಿಯಡಿ ಅವಕಾಶವಿಲ್ಲ ಎಂದು ನ್ಯಾಯಪೀಠ ತೀರ್ಪಿನಲ್ಲಿ ತಿಳಿಸಿದೆ.
ಕೊರೊನಾ ಸೋಂಕಿನ ಕಾರಣ ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸಲು ಆಡಳಿತಾಧಿಕಾರಿಗಳಿಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ಮುಂದಿನ ಚುನಾವಣೆ ನಡೆಯುವ ತನಕ ಪ್ರಸ್ತುತ ಸದಸ್ಯರನ್ನೇ ಮುಂದುವರಿಸಬೇಕು ಎಂಬ ಅರ್ಜಿದಾರರ ವಾದವನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ನಿರಾಕರಿಸಿದೆ.
ರಾಜ್ಯದ ಬಹುತೇಕ ಗ್ರಾಮ ಪಂಚಾಯಿತಿಗಳ 5 ವರ್ಷದ ಅವಧಿ 2020ರ ಜೂನ್‌ನಿಂದ ಪ್ರಾರಂಭವಾಗಿ ವಿವಿಧ ದಿನಾಂಕಗಳಂದು ಪೂರ್ಣಗೊಳ್ಳಲಿದೆ. ಕೊರೊನಾ ಹಿನ್ನೆಲೆಯಲ್ಲಿ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆಗಳು ನಡೆಯದಿಲ್ಲ.