ಬೆಂಗಳೂರು: ಮುಖ್ಯಮಂತ್ರಿ ಕೋವಿಡ್ ಫಂಡ್‍ಗೆ ಬಂದ 290 ಕೋಟಿಯಲ್ಲಿ ಒಂದು ರೂಪಾಯಿಯನ್ನಾದರೂ ಖರ್ಚು ಮಾಡಿದ್ದೀರಾ ಎಂದು ಸಿಎಂ ಯಡಿಯೂರಪ್ಪ ಅವರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಲಾಕ್‍ಡೌನ್‍ಗಿಂತ ಮುಂಚಿತವಾಗಿ ನಮ್ಮ ದೇಶದಲ್ಲಿ ಕಡಿಮೆ ಸೋಂಕಿತ್ತು. ಕಡಿಮೆ ಸೋಂಕು ಇದ್ದಾಗ ಸಿದ್ಧತೆ ಮಾಡಿಕೊಳ್ಳಲು ದೇಶದಲ್ಲಿ ಮತ್ತು ರಾಜ್ಯದಲ್ಲಿ ಸಮಯ ಇತ್ತು. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಆ ಬಗ್ಗೆ ನಿರ್ಲಕ್ಷ್ಯ ಮಾಡಿದ್ದರಿಂದ ಸೋಂಕು ಹೆಚ್ಚಾಗಿದೆ. ಅವರು ಮಾಡಿದ ತಪ್ಪಿನಿಂದಾಗಿ ಇಂದು ಜಗತ್ತಿನಲ್ಲಿ ನಾವು ನಾಲ್ಕನೇ ಸ್ಥಾನದಲ್ಲಿ ಇದ್ದೇವೆ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರದಲ್ಲಿ ಸಚಿವರ ನಡುವೆಯೇ ಸಮನ್ವಯತೆ ಇಲ್ಲ. ಶ್ರೀರಾಮುಲು ಮತ್ತು ಸುಧಾಕರ್ ಇಬ್ಬರಿಗೂ ಸೋಂಕು ನಿರ್ವಹಹಣೆಯ ಜವಾಬ್ದಾರಿ ಕೊಟ್ಟರು. ಈಗ ಸುಧಾಕರ್ ಬಿಟ್ಟು ಅಶೋಕ್‍ಗೆ ಕೊಟ್ಟಿದ್ದಾರಂತೆ. ಸುಧಾಕರ್ ನಿಂದ ಕಿತ್ತು ಅಶೋಕ್‍ಗೆ ಏಕೆ ಕೊಟ್ಟರು. ಸುಧಾಕರ್ ಡಾಕ್ಟರ್, ಪ್ರಾಕ್ಟೀಸ್ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಅವನಿಗೆ ಮೆಡಿಕಲ್ ಬೆಸಿಕ್ ಗೊತ್ತಿರುತ್ತೆ ಎಂದು ಸುಧಾಕರ್ ಪರವಾಗಿ ಬ್ಯಾಟ್ ಬೀಸಿದರು.
ನಮ್ಮ ದೇಶದ ಪ್ರಾಕೃತಿಕ ಗುಣ ಲಕ್ಷಣಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಆ ಕಾರಣದಿಂದ ಸಾವಿನ ಸಂಖ್ಯೆ ನಮ್ಮಲ್ಲಿ ಕಡಿಮೆ ಇದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೋಂಕನ್ನು ತಡೆಯಲು ಸರಿಯಾದ ರೀತಿ ಸಿದ್ಧತೆ ಮಾಡಿಕೊಳ್ಳದೇ ನಮ್ಮಲ್ಲಿ ಸಾವಿನ ಸಂಖ್ಯೆ ಕಡಿಮೆ ಎಂದು ಹೇಳುತ್ತಿವೆ ಎಂದು ವ್ಯಂಗ್ಯವಾಡಿದರು.
ಶವಸಂಸ್ಕಾರ ಮಾಡಲು ಹೆದರುತ್ತಿದ್ದಾರೆ
ಶವ ಸುಟ್ಟ ಬಳಿಕ ಬೂದಿಯನ್ನ ತೆಗೆದುಕೊಳ್ಳುವುದಕ್ಕೆ ಕುಟುಂಬದವರು ಹೆದರುತ್ತಿದ್ದಾರೆ. ಅಗತ್ಯ ಕ್ರಮ ತೆಗೆದುಕೊಂಡು ಶವ ಮುಟ್ಟಿದರೆ ಏನೂ ಆಗಲ್ಲ. ಆರೋಗ್ಯ ಸಚಿವರ ಜಿಲ್ಲೆ ಬಳ್ಳಾರಿಯಲ್ಲಿ ನಡೆದ ಘಟನೆ ಅಮಾನುಷವಾಗಿದೆ. ಇಷ್ಟು ಸಾವಿನ ನಂತರವೂ ಶವ ಸಂಸ್ಕಾರ ಹೇಗೆ ಮಾಡುವುದು ಎಂದು ತಿಳಿದುಕೊಳ್ಳಬಾರದ ಎಂದು ಸಿದ್ದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಎಂ ಯಡಿಯೂರಪ್ಪ ಅಸಹಾಯಕರಾಗಿದ್ದಾರೆ, ಇನ್ನು ಸಚಿವರಲ್ಲಿ ಸಮನ್ವಯತೆ ಇಲ್ಲ. ಕ್ಷೌರಿಕರು, ಆಟೋ ಡ್ರೈವರ್ ಗಳಿಗೆ ಈ ತನಕ ಯಾರೊಬ್ಬರಿಗೂ ಪರಿಹಾರ ತಲುಪಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಬೇಕು. ಕೊರೊನಾ ಸೋಂಕು ನಿಯಂತ್ರಿಸಲು ಏನು ಕ್ರಮ ಜರುಗಿಸಿದ್ದೇವೆ ಎಂಬುದನ್ನು ತಿಳಿಸಬೇಕು ಎಂದು ಒತ್ತಾಯಿಸಿದ್ದಾರೆ.