ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ ಕೊರೊನಾ ಸೋಂಕಿನಿಂದ ಜನ ತತ್ತರಿಸುತ್ತಿದ್ದರೆ, ಇತ್ತ ಮತ್ತೆ ಮಚ್ಚು ಲಾಂಗು ಆರ್ಭಟಿಸಿದ್ದು ಕಾಂಗ್ರೆಸ್ ಕಾರ್ಯಕರ್ತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ನಗರದ ಯಲಹಂಕ ಬಳಿಯ ಪಾಲನಹಳ್ಳಿಯಲ್ಲಿ ಗುರುವಾರ ತಡರಾತ್ರಿ ನಡೆದಿರುವ ಘಟನೆಯಲ್ಲಿ 35 ವರ್ಷದ ಚನ್ನಕೇಶವ ಅಲಿಯಾಸ್ ಕೇಶವ ಎಂಬುವರು ಕೊಲೆಯಾಗಿದ್ದಾರೆ.
ಕಾರಿನಲ್ಲಿ ತೆರಳುತ್ತಿದ್ದ ಚನ್ನಕೇಶವ ಅವರನ್ನು ತಡೆದು ನಿಲ್ಲಿಸಿದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಿದೆ. ಹತ್ಯೆಗೆ ಹಳೇ ದ್ವೇಷವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕೊಲೆಯಾದ ಕೇಶವ್ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು, ಮುಂಬರುವ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿದ್ದರು ಎಂದು ಹೇಳಲಾಗಿದೆ. ಹತ್ಯೆ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.