ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆ ಕಂಡು ಬರುತ್ತಿದ್ದರೆ ಇತ್ತ ಬಿಬಿಎಂಪಿ ಸೋಂಕಿ ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಜರುಗಿಸಲು ಸಂಪೂರ್ಣವಿಫಲವಾಗಿದ ಎಂದು ಮಾಜಿ ಸಚಿವ ದಿನೇಶ್ ಗುಡೂರಾವ್ ಪತ್ನಿ ತಬುರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತಮ್ಮ ಸ್ವಂತ ಅನುಭವವನ್ನು ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿರುವ ಅವರು, ನಮ್ಮ ಸಿಬ್ಬಂದಿಯೊಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ನಾವು ಅವರನ್ನು ಜೂನ್ 30 ರಂದು ಕೋವಿಡ್ ಪರೀಕ್ಷೆ ಒಳಪಡಿಸಿದ್ದೆವು. ಫಲಿತಾಂಶ ಜುಲೈ 3 ರಂದು ಪಾಸಿಟಿವ್ ಎಂದು ಬಂದಿತು. ಪಾಸಿಟಿವ್ ಎಂದ ಕೂಡಲೇ ಬಿಬಿಎಂಪಿ ಅವರನ್ನು ಕೋವಿಡ್ ಕೇರ್ ಸೆಂಟರ್‌ಗೆ ಸ್ಥಳಾಂತರಿಸಬೇಕಿತ್ತು. ಅಂತಹ ಯಾವುದೇ ಕೆಲಸವನ್ನು ಮಾಡಲಿಲ್ಲ. ಜತೆಗೆ ಅವರನ್ನು ಸಂಪರ್ಕಿಸುವ ಯತ್ನವನ್ನು ಮಾಡಲಿಲ್ಲ. ಬಳಿಕ ನಾವು ಅವನನ್ನು ನಮಗೆ ಗೊತ್ತಿರುವ ಆಸ್ಪತ್ರೆಗೆ ಸೇರಿಸಬೇಕಾಯಿತು ಎಂದು ವಿವರಿಸಿದ್ದಾರೆ.
ಈ ರೀತಿ ಬಿಬಿಎಂಪಿ ವಿಳಂಬ ಧೋರಣೆ ತಳೆದಿರುವುದರಿಂದ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿತ್ಯ ಸಾವಿರ ಗಡಿ ದಾಟುತ್ತಿದೆ. ಇನ್ನಾದರೂ ಈ ಬಗ್ಗೆ ಎಚ್ಚರ ವಹಿಸಿ ಸೋಂಕಿತರ ಸಂಪರ್ಕ ಪತ್ತೆಹಚ್ಚಿ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಎಂದು ಸಲಹೆ ನೀಡಿದ್ದಾರೆ.
ಇನ್ನು ನಮ್ಮ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿರುವುದರಿಂದ ನಮ್ಮ ಕುಟುಂಬ ಸೇರಿ ಅವರೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲರೂ ಪ್ರತ್ಯೇಕವಾಗಿರಬೇಕು. ಇದನ್ನು ನಾವು ಹೇಗೊ ಮಾಡಿಕೊಂಡಿದ್ದೇವೆ. ಜತೆಗೆ ಕುಟುಂಬದ ಎಲ್ಲಾ ಸದಸ್ಯರು, ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯ ಗಂಟಲು ದ್ರವವನ್ನು ಖಾಸಗಿ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷಿಸಿದ್ದೇವೆ. ದುರದೃಷ್ಟವಶಾತ್, ಇತರ ನಾಲ್ಕು ಸಿಬ್ಬಂದಿಗೂ ಪಾಸಿಟಿವ್ ಬಂದಿದೆ. ನಮ್ಮ ಕುಟುಂಬ ಸದಸ್ಯರಿಗೆ ನೆಗೆಟಿವ್ ಎಂದು ಪರೀಕ್ಷೆ ವರದಿ ಬಂದಿದೆ ಎಂದು ತಿಳಿಸಿದ್ದಾರೆ.
ಈ ನಾಲ್ಕು ಜನರಿಗೂ ಪಾಸಿಟಿವ್ ಎಂದು ವರದಿ ಬಂದಿದ್ದರೂ ಬಿಬಿಎಂಪಿಯಿಂದ ಯಾವುದೇ ಕರೆ ಬಂದಿಲ್ಲ ಹೀಗಾಗಿ ನಾವೇ ಆ ಸಿಬ್ಬಂದಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸಬೇಕಾಯಿತು. ಇಲ್ಲಿಯವರೆವಿಗೂ ಬಿಬಿಎಂಪಿ ಅವರ ಮನೆಗಳಿಗೆ ಭೇಟಿ ನೀಡಿಲ್ಲ. ಜತೆಗೆ ಅವರ ಕುಟುಂಬ ಸದಸ್ಯರನ್ನು ಕ್ವಾರಂಟೈನ್ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾವು ನಮ್ಮನ್ನು ಸ್ವಯಂ ಕ್ವಾರಂಟೈನ್ ಮಾಡಿಕೊಂಡಿದ್ದು, ಯಾರೂ ನಮ್ಮನ್ನು ಭೇಟಿ ಮಾಡದಂತೆ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದೇವೆ. ಇನ್ನು ಒಬ್ಬ ಶಾಸಕ, ಮಾಜಿ ಸಚಿವರ ಸ್ಥಿತಿಯೇ ಈ ರೀತಿಯಾದರೆ, ಬಿಬಿಎಂಪಿ ಜನ ಸಾಮಾನ್ಯರೊಂದಿಗೆ ಹೇಗೆ ವರ್ತಿಸುತ್ತದೆ ಎಂದು ಊಹಿಸಿಕೊಳ್ಳಲು ಭಯವಾಗುತ್ತದೆ ಎಂದು ಹೇಳಿದ್ದಾರೆ.
ಬಿಬಿಎಂಪಿಯ ಸಂಪೂರ್ಣ ನಿರ್ಲಕ್ಷ್ಯಕ್ಕೆ ಧನ್ಯವಾದಗಳು. ಬಿಬಿಎಂಪಿಯ ಈ ನಡೆಯಿಂದ ನೂರಾರು ಅಥವಾ ಸಾವಿರಾರು ಕೋವಿಡ್ ಸೋಂಕಿತ ವ್ಯಕ್ತಿಗಳು ಬೀದಿಗಳಲ್ಲಿ ಮುಕ್ತವಾಗಿ ತಿರುಗಾಡಬಹುದು ಮತ್ತು ವೈರಸ್ ಅನ್ನು ಇತರರಿಗೆ ಅಷ್ಟೇ ಮುಕ್ತವಾಗಿ ಹರಡಬಹುದು ಎಂದು ಅಧಿಕಾರಿಗಳ ನಡೆ ಬಗ್ಗೆ ವ್ಯಂಗ್ಯವಾಡಿದ್ದಾರೆ ಜತೆಗೆ ಆತಂಕವನ್ನು ವ್ಯಕ್ತಪಡಿಸಿದ್ದಾರೆ.