ಬೆಂಗಳೂರು: ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಅಕ್ಷಮ್ಯ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಧರ್ಮದ ಹೆಸರಲ್ಲಿ ಯಾರೇ ಗೂಂಡಾಗಿರಿ, ಕಾನೂನು ಕೈಗೆತ್ತಿಕೊಂಡರೂ ಅಂತವರನ್ನು ಮುಲಾಜಿಲ್ಲದೆ ಮಟ್ಟಹಾಕಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಯಾವುದೇ ಧರ್ಮದ ಸಮುದಾಯ ಕಾನೂನಿಗೆ ಅತೀತರಲ್ಲ. ನೆಲದ ಕಾನೂನನ್ನು ಗೌರವಿಸದ ಯಾರೊಬ್ಬರೂ ಶಿಕ್ಷೆಗೆ ಅರ್ಹರು. ಸರ್ಕಾರ ಪುಂಡಾಟ ನಡೆಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಮುಂದೆಂದೂ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.
ಅವಿವೇಕಿಯೊಬ್ಬ ಪೈಗಂಬರ್ ಅವರ ಬಗ್ಗೆ ಅವಹೇಳನ ಮಾಡಿದ, ಆತನಿಗೆ ಶಿಕ್ಷೆಯಾಗಬೇಕು ನಿಜ, ಆದರೆ ಪೈಗಂಬರ್ ಅನುಯಾಯಿಗಳು ದಾಂಧಲೆಗಿಳಿಯುವ ಮೂಲಕ ಪ್ರವಾದಿಯ ಪವಿತ್ರ ಸಂದೇಶಗಳನ್ನು ಮಣ್ಣುಪಾಲು ಮಾಡುವುದು ಆ ಧರ್ಮಕ್ಕೆ ಮಾಡಿದ ಅಪಚಾರ ಎಂದು ಹೇಳಿದ್ದಾರೆ.
ಕಾನೂನು ಪಾಲಕ ಪೊಲೀಸರು ಮತ್ತು ವರದಿಗಾಗಿ ತೆರಳಿದ್ದ ಪತ್ರಕರ್ತರ ಮೇಲೆ ಅಮಾನುಷ ದೌರ್ಜನ್ಯ ನಡೆಸುವ ಮೂಲಕ ನಾಗರಿಕ ಸಮಾಜಕ್ಕೆ ಯಾವ ಸಂದೇಶ ರವಾನಿಸುತ್ತದೆ ಎಂಬ ಕನಿಷ್ಠ ಪ್ರಜ್ಞೆಯೂ ಇಲ್ಲದೆ ವರ್ತಿಸಿರುವುದು ಅತ್ಯಂತ ಖಂಡನೀಯ ಎಂದು ಖಂಡಿಸಿದ್ದಾರೆ.
ಧರ್ಮದ ಹೆಸರಿನಲ್ಲಿ ಪುಂಡಾಟಿಕೆ ನಡೆಸುವ ಮೂಲಕ ಸಂವಿಧಾನದ ಮೇಲೆ ಸವಾರಿ ಮಾಡುವ ಇಂತಹ ಘಟನೆಗಳಿಂದ ಸಾರ್ವತ್ರಿಕ ತಿರಸ್ಕಾರಕ್ಕೆ ಮತ್ತು ಅವಗಣನೆಗೆ ಸಮುದಾಯವೊಂದು ಪದೇಪದೆ ಗುರಿಯಾಗುತ್ತಿರುವುದು ಸ್ವಯಂಕೃತ ಅಪರಾಧವಲ್ಲದೆ ಬೇರೇನಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಪೂರ್ವಯೋಜಿತ ಸಂಚು ಎಂಬ ಅನುಮಾನಕ್ಕೂಪುಷ್ಟಿ ನೀಡಿದೆ. ಸ್ಥಳೀಯ ಜನಪ್ರತಿನಿಧಿಗಳ ಸ್ವಜನಪಕ್ಷಪಾತ, ಅಧಿಕಾರ ಲಾಲಸೆಗಳಿಂದಾಗಿ ಇಂಥದೊಂದು ಸಣ್ಣ ಕಿಡಿ ಬೆಂಕಿಯುಂಡೆ ಆಗುವ ಮೂಲಕ ಅಮಾಯಕ ಜನರ ಸಿಟ್ಟು-ಸೆಡವು ಸ್ಫೋಟಗೊಂಡಿದೆ. ನಿರುಪದ್ರವಿಗಳ ರಕ್ತ ಚೆಲ್ಲಾಡಿದೆ. ಕೌಟುಂಬಿಕ ದ್ವೇಷಾಸೂಯೆಗಳು ದುರ್ವರ್ತನೆಗೆ ವೇದಿಕೆಯಾಗಿರುವುದು ಸುಳ್ಳಲ್ಲ ಎಂದು ತಮ್ಮ ಟ್ವಿಟರ್ ನಲ್ಲಿ ಕಿಡಿಕಾರಿದ್ದಾರೆ.
Irithiya varthane sary alla neevu helirodu ok sir kaanunige talebaagabeku