ಬಸ್ ಇಲ್ಲ ಅಂತ KSRTC ಅಧಿಕಾರಿಗಳ ಬೆವರಿಳಿಸಿದ ವಿದ್ಯಾರ್ಥಿನಿ
ಉಚಿತ ಬಸ್ ಪ್ರಯಾಣ ಬೇಡ ಸಮಯಕ್ಕೆ ಸರಿಯಾಗಿ ಬಸ್ ಓಡಿಸಿ ಅಂತ ಆಗ್ರಹಿಸಿ ಪ್ರತಿಭಟನೆ
ಉಡುಪಿ: ನಮಗೆ ಉಚಿತ ಅನ್ನೋದೆ ಬೇಡ ಸಮಯಕ್ಕೆ ಸರಿಯಾಗಿ ಬಸ್‌ಗಳನ್ನು ಓಡಿಸಿ ಸಾಕು ಆಗ ನಾವು ಶಾಲೆ ಕಾಲೇಜುಗಳಿಗೆ ಇನ್‌ಟೈಂಗೆ ಹೋಗಬಹುದು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಎಬಿವಿಪಿ ನೇತೃತ್ವದಲ್ಲಿ ನಿನ್ನೆ ಕುಂದಾಪುರದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ತಮಗಾಗುವ ಬಸ್ ಸಮಸ್ಯೆ ಹೇಳುತ್ತಾ, ಸರ್ಕಾರದ ಇಲಾಖೆಯ ವಿರುದ್ಧ ಧಿಕ್ಕಾರ ಕೂಗಿದರು. ಉಚಿತ ಬಸ್ಸಿನಿಂದಾಗಿ ವಿದ್ಯಾರ್ಥಿಗಳು ಅಲೆದಾಡುವಂತಾಗಿದೆ. ಬೆಳಗ್ಗೆ, ಸಂಜೆ ಬಸ್ಸಿನಲ್ಲಿ ಸೀಟ್ ಸಿಗುವುದಿಲ್ಲ. ಸರಿಯಾದ ಸಮಯಕ್ಕೆ ಕಾಲೇಜು ಬಳಿಕ ಮನೆ ತಲುಪುವುದು ಕಷ್ಟವಾಗುತ್ತಿದೆ ಎಂದು ಸರ್ಕರ ಮತ್ತು ಸಾರಿಗೆ ಸಂಸ್ಥೆ ವಿರುದ್ಧ ಕಿಡಿಕಾರಿದರು.
ಇನ್ನು ಗ್ರಾಮೀಣ ಭಾಗದಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಿಸಿ ಸಹಾಯ ಮಾಡಿ, ನಮಗೆ ಉಚಿತ ಎಂಬುವುದು ಬೇಡ ನಾವು ಪಾಸ್ ತೆಗೆದುಕೊಂಡೆ ಓಡಾಡುತ್ತೇವೆ. ನೀವು ಉಚಿತ ಎಂದೇಳಿ ಬಸ್‌ಗಳನ್ನೇ ಓಡಿಸದಿದ್ದರೆ ನಾವು ಕಾಲೇಜಿಗೆ ತಲುಪುವುದಾದರೂ ಹೇಗೆ ಎಂದು ಪ್ರತಿಭಟನಾ ನಿರತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನೀವು ಸರಿಯಾದ ಸಮಯಕ್ಕೆ ಓಡುವ ಹೆಚ್ಚುವರಿ ಬಸ್‌ಗಳನ್ನು ಕೊಡಿ. ನಾವು ಪಾಸ್ ಮಾಡಿಸುತ್ತೇವೆ. ಹಣಕೊಟ್ಟು ಪ್ರಯಾಣ ಮಾಡುತ್ತೇವೆ ಎಂದು ಪ್ರತಿಭಟನಾ ನಿರತ ಬೈಂದೂರಿನ ವಿದ್ಯಾರ್ಥಿನಿಯೊಬ್ಬರು ಏರು ಧ್ವನಿಯಲ್ಲೇ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಮುಂದೆ ಅಸಮಾಧಾನ ಹೊರಹಾಕಿದರು.
ಇನ್ನು ಈ ಕುರಿತು ವಿದ್ಯಾರ್ಥಿನಿಯೊಬ್ಬಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದ್ದು, ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರ ಕೊಡಿ. ಅವರ ಸಮಸ್ಯೆಯನ್ನು ಕೇಳಿ, ಅದಕ್ಕೆ ಏನು ಪರಿಹಾರ ಕೊಡುತ್ತೀರಿ ಕೊಡಿ. ವಿದ್ಯಾರ್ಥಿಗಳಿಗೆ ಸಮಸ್ಯೆಯಾದರೆ ಅವರೊಂದಿಗೆ ಶಾಸಕನಾಗಿ ನಾನು ಕೂಡ ಪ್ರತಿಭಟನೆಯಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಎಚ್ಚರಿಸಿದರು.