ಮಳವಳ್ಳಿ: ಸ್ಕೂಟರ್‌ನ ಡಿಕ್ಕಿಯಲ್ಲಿ ಹಾಯಾಗಿ ಮಲಗಿದ್ದ ಮಂಡಲ ಹಾವು ಕಂಡ ಮಹಿಳೆಯೊಬ್ಬರು ಬೆದರಿ ಎದ್ದು ಬಿದ್ದು ಓಡಿ ಹೋದ ಘಟನೆ ಟೌನ್‌ನಲ್ಲಿ ನಡೆದಿದೆ. ಹೋಟೆಲ್ ಒಂದರ ಸಮೀಪ ನಿಲ್ಲಿಸಿದ ಸ್ಕೂಟರ್ ಡಿಕ್ಕಿಯಲ್ಲಿ ಈ ಹಾವು ಆಯಾಗಿ ಸೇರಿಕೊಂಡಿದ್ದು ಕ್ಷಣಕಾಲ ಆತಂಕ ಸೃಷ್ಟಿಸಿತ್ತು.
ಚಳಿ, ಶೀತಗಾಳಿ ಜಿಟಿ ಜಿಟಿ ಮಳೆ ಶುರುವಾದರೆ ಸಾಕು ಬೆಚ್ಚಗಿರುವ ಜಾಗ ಹುಡುಕಿಕೊಂಡು ಹೊರಬರುವ ಹಾವುಗಳು ಶೂ ಒಳಗೆ, ಹೆಲ್ಮೆಟ್ ಹೀಗೆ ನಾನಾ ಸ್ಥಳಗಳನ್ನು ಆಯ್ಕ ಮಾಡಿಕೊಳ್ಳುತ್ತವೆ. ಅದೇರೀತಿ ಇಂದು ಸ್ಕೂಟರ್‌ನಲ್ಲಿ ಹಾವು ಪ್ರತ್ಯಕ್ಷವಾಗಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ವೈಭವ್ ಹೋಟೆಲ್ ಬಳಿ ಈ ಘಟನೆ ನಡೆದಿರುವುದು. ಮಹಿಳೆಯೊಬ್ಬರು ಕೆಲಸ ಮುಗಿಸಿಕೊಂಡು ತಮ್ಮ ಹೊಂಡಾ ಆಕ್ಟೀವ್ ಸ್ಕೂಟಿ ಬಳಿ ಬಂದಿದ್ದಾರೆ. ಈ ವೇಳೆ ಹೆಲ್ಮೆಟ್ ತೆಗೆದುಕೊಳ್ಳಲು ಸ್ಕೂಟರ್ ಡಿಕ್ಕಿ ತೆರೆದಿದ್ದು ಅಷ್ಟೇ ಬೆಚ್ಚಗೆ ಮಲಗಿದ್ದ ಮಂಡಲದ್ಹಾವು ಕಂಡು ಬೆಚ್ಚಿಬಿದ್ದಾರೆ.
ಹಾವು ಕಂಡ ಕೂಡಲೇ ಮಹಿಳೆ ಜೋರಾಗಿ ಕಿರುಚಿ ಎದ್ದೆನೋ ಬಿದ್ದೆನೋ ಎಂದು ಓಡಿ ಹೋಗಿದ್ದಾರೆ. ಮಹಿಳೆಯ ಕಿರುಚಾಟಕ್ಕೆ ಹೋಟೆಲ್‌ವೊಳಗೆ ಇದ್ದವರು, ಸುತ್ತಮುತ್ತಲ ಜನರು ಆತಂಕಗೊಂಡು ಓಡಿ ಬಂದಿದ್ದಾರೆ. ಬಳಿಕ ಮಂಡಲದ್ಹಾವು ಇರುವುದನ್ನು ನೋಡಿ ಸ್ಥಳೀಯರೊಬ್ಬರು ಉರಗ ತಜ್ಞರಿಗೆ ಕರೆ ಮಾಡಿ ವಿಷಯ ತಿಳಿಸಿದರು.
ಸ್ಥಳಕ್ಕೆ ಬಂದ ಉರಗ ರಕ್ಷಕರು ಮಂಡಲದ್ಹಾವನ್ನು ಸೆರೆಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಒಟ್ಟಾರೆ ಕೆಲಸ ಮುಗಿಸಿಕೊಂಡು ಆಯಾಸದಿಂದ ಮನೆಗೆ ಹೊರಡಲು ಸಿದ್ದವಾಗಿದ್ದ ಮಹಿಳೆಗೆ ಇನ್ನಷ್ಟು ಆಯಾಸವಾಗಿದ್ದು ಮಾತ್ರ ಸುಳ್ಳಲ್ಲ.