ಬೆಂಗಳೂರು: ಸಾರಿಗೆ ಸಚಿವ ಶ್ರೀರಾಮುಲು ರಾಜೀನಾಮೆಗೆ ಆಗ್ರಹಿಸಿ ಆಮ್ ಆದ್ಮಿ ಪಕ್ಷ ಸೆ.13ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಿರುವ ಬೃಹತ್ ಪ್ರತಿಭಟನಾ ಹಾಗೂ ಮುತ್ತಿಗೆ ಕಾರ್ಯಕ್ರಮವನ್ನು ಇದೇ ಸೆ. 14 ರ ಬುಧವಾರಕ್ಕೆ ಮುಂದೂಡಲಾಗಿದೆ ಎಂದು ಪಕ್ಷದ ಬೆಂಗಳೂರು ನಗರಾಧ್ಯಕ್ಷ ಮೋಹನ್ದಾಸರಿ ತಿಳಿಸಿದ್ದಾರೆ.
ಇನ್ನು ಬೃಹತ್ ಪ್ರತಿಭಟನೆಗೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ನೌಕರರ ಸರಣಿ ಆತ್ಮಹತ್ಯೆಗಳು ನಡೆಯುತ್ತಿದ್ದರೂ ತುಟಿ ಬಿಚ್ಚದ ಸಾರಿಗೆ ಸಚಿವ ಶ್ರೀರಾಮುಲು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಇದೇ ಸೆ.14ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ನೌಕರರ ಸಮಸ್ಯೆ ಆಲಿಸದ ಸಾರಿಗೆ ಸಚಿವ ಶ್ರೀರಾಮುಲು ರಾಜೀನಾಮೆ ನೀಡಬೇಕು. ಕಳೆದ 10ದಿನಗಳಲ್ಲಿ 6 ಮಂದಿ ಸಾರಿಗೆ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗೆ ಸರಣಿ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿದ್ದರು ಸಚಿವರಾದವರು ಏನು ಹೇಳದೆ ಕಿವಿ ಕಣ್ಣು ಬಾಯಿ ಮುಚ್ಚಿಕೊಂಡು ಕೂತಿರುವುದು ನಾಚಿಕೆಗೇಡಿನ ಸಂಗತಿ. ಇಂಥ ಸಚಿವರಿಂದ ನೌಕರರಿಗೆ ನ್ಯಾಯಯುತವಾಗಿ ಸಿಗಬೇಕಿರುವುದು ಸಿಗುವುದು ಕೂಡ ಡೌಟ್ ಹಾಗಾಗಿ ಇವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಒಂದೇ ದಿನ ಮೂವರು ಸಾರಿಗೆ ನೌಕರರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಸುವ ಮುನ್ನವೇ ಮತ್ತೊಬ್ಬ, ಮತ್ತೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಕೂಡ ಸರ್ಕಾರ ನಿಗಮದ ಅಧಿಕಾರಿಗಳು ಹಾಗೂ ಸಾರಿಗೆ ಸಚಿವರು ಯಾವುದೇ ಸಲಹೆ, ಸಾಂತ್ವನ ನೀಡುವ ಸೌಜನ್ಯವನ್ನು ತೋರುತ್ತಿಲ್ಲ ಎಂದು ಮೋಹನ್ದಾಸರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.