NEWSನಮ್ಮಜಿಲ್ಲೆಬೆಂಗಳೂರು

ಬೆಂಗಳೂರಿನ ಅಭಿವೃದ್ಧಿಗೆ ಸಲಹೆ ನೀಡಿ: ಸಾರ್ವಜನಿಕರಲ್ಲಿ ಡಿಸಿಎಂ ಡಿಕೆಶಿ ಮನವಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರಿನ ಅಭಿವೃದ್ಧಿ ವಿಚಾರದಲ್ಲಿ ನನಗೆ ಸಾರ್ವಜನಿಕರ ಅಭಿಪ್ರಾಯ ಬಹಳ ಮುಖ್ಯ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬೆಂಗಳೂರಿನ ಸರ್ವಪಕ್ಷಗಳ ಶಾಸಕರ ಸಭೆ ಮಾಡಿದ್ದೇನೆ. ಬೆಂಗಳೂರಿನ ಎಲ್ಲ ವರ್ಗಗಳ ಬ್ರ್ಯಾಂಡ್ ಅಂಬಾಸಿಡರ್‌ಗಳ ಜತೆ ಚರ್ಚಿಸಿದ್ದೇನೆ. ಇವರ ಜತೆಗೆ ಸಾರ್ವಜನಿಕರ ಅಭಿಪ್ರಾಯವೂ ಮುಖ್ಯ. ಹೀಗಾಗಿ ಅಭಿಪ್ರಾಯ ಸಂಗ್ರಹಿಸಲು ಪೋರ್ಟಲ್ ಆರಂಭಿಸುತ್ತಿದ್ದೇವೆ ಎಂದು ಹೇಳಿದರು.

ಬೆಂಗಳೂರಿನ ನಾಗರೀಕರು ಹಾಗೂ ವಿದೇಶದಲ್ಲಿರುವ ಕನ್ನಡಿಗರು ಬೆಂಗಳೂರಿನ ಅಭಿವೃದ್ಧಿ ವಿಚಾರವಾಗಿ ತಮ್ಮ ಸಲಹೆಗಳನ್ನು www.brandbengaluru.karnataka.gov.in ವೆಬ್ ಸೈಟ್ ನಲ್ಲಿ ನಿಗದಿತ ಕಾಲಮಿತಿ ಜೂನ್ 30ರ ಒಳಗಾಗಿ ನೀಡಬೇಕು ಎಂದು ಮನವಿ ಮಾಡಿದರು.

ಇನ್ನು ಶಾಸಕರು, ಅಧಿಕಾರಿಗಳು, ಅಂಬಾಸಿಡರ್‌ಗಳ ಸಭೆಯಲ್ಲಿ ವಾಹನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಹೈ ಡೆನ್ಸಿಟಿ ಕಾರಿಡಾರ್, ಮೆಟ್ರೋ ಸಂಪರ್ಕ ವಿಸ್ತರಣೆ, ಮೊನೊ ರೈಲು, ಉಪನಗರ ರೈಲು, ರಸ್ತೆ ಅಗಲೀಕರಣ, ಎಲಿವೇಟೆಡ್ ರಸ್ತೆ, ನೈಸ್ ರಸ್ತೆಯನ್ನು ವರ್ತುಲ ರಸ್ತೆ ಆಗಿ ಮಾರ್ಪಾಡು, ನಗರದಲ್ಲಿ ಸುರಂಗ ರಸ್ತೆಗಳ ನಿರ್ಮಾಣದ ಬಗ್ಗೆ ಸಲಹೆ ನೀಡಲಾಗಿದೆ.

ಸ್ವಚ್ಛತೆ, ಪರಿಸರ ವಿಚಾರದಲ್ಲಿ ಕಸ ವಿಲೇವಾರಿ ಹಾಗೂ ಕೊಳಚೆ ನೀರು ನಿರ್ವಹಣೆ, ಕೊಳಚೆ ನೀರು ಪರಿಷ್ಕರಣೆ ಮತ್ತು ಮರುಬಳಕೆ, ಕಾವೇರಿ ನೀರು ಪೂರೈಕೆ, ಕೊಳಗೇರಿ ಪ್ರದೇಶ ಅಭಿವೃದ್ಧಿ ಸೇರಿದಂತೆ ದಕ್ಷ ಆಡಳಿತ, ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ ಕ್ರಮವಹಿಸಲಾಗುತ್ತಿದೆ ಎಂದರು.

ಈ ಮಧ್ಯೆ ಕೆಲವು ದೊಡ್ಡ ನಾಯಕರ ಮನೆಗೆ ಹೋಗಿ ಚರ್ಚೆ ಮಾಡಲು ತೀರ್ಮಾನಿಸಿದ್ದೇನೆ. ಮಾಜಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದು, ಇನ್ನು ಕೆಲವರನ್ನು ಭೇಟಿ ಮಾಡಬೇಕು. ಬೊಮ್ಮಾಯಿ ಅವರ ಸಮಯ ಕೇಳಿದ್ದು, ಅವರು ಬ್ಯುಸಿ ಇದ್ದ ಕಾರಣ ಭೇಟಿ ಮಾಡಿಲ್ಲ. ಅವರ ವಿಚಾರಧಾರೆಗಳನ್ನು ತಿಳಿಯಬೇಕು. ಬೆಂಗಳೂರಿನ ಸಂಚಾರದಟ್ಟಣೆ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ ಬೇರೆ ನಗರಗಳ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಕಾರಣ ಬೆಂಗಳೂರನ್ನು ಇಡೀ ವಿಶ್ವ ನೋಡುತ್ತಿದೆ ಅದಕ್ಕೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗದಲ್ಲಿ ಅಂಗಡಿ ಇಟ್ಟುಕೊಳ್ಳಲಾಗಿದೆ. ಈ ಬಗ್ಗೆ ಗಮನ ಹರಿಸಬೇಕು. ಸಂಚಾರ ದಟ್ಟಣೆ ವಿಚಾರವಾಗಿ ನಿವೃತ್ತ ಟ್ರಾಫಿಕ್ ಪೊಲೀಸರ ಅಭಿಪ್ರಾಯ ಪಡೆಯುತ್ತೇನೆ. ಅನುಭವದ ಆಧಾರದ ಮೇಲೆ ಬರುವ ಸಲಹೆಗಳಿಗೆ ಹೆಚ್ಚಿನ ತೂಕ ಇರುತ್ತದೆ. ಸುರಂಗ ಮಾರ್ಗ ನಿರ್ಮಾಣದ ಬಗ್ಗೆ ಸಲಹೆ ಬಂದಿದ್ದು, ನಮ್ಮ ರಾಜ್ಯದವರು ಮುಂಬೈನಲ್ಲಿ ಮತ್ತು ಪಕ್ಕದ ರಾಜ್ಯದವರು ಕಾಶ್ಮೀರದಲ್ಲಿ ಸುರಂಗ ಮಾರ್ಗ ನಿರ್ಮಿಸುತ್ತಿದ್ದಾರೆ ಎಂದು ಹೇಳಿದರು.

ಬೆಂಗಳೂರು ಅಭಿವೃದ್ಧಿಗೆ ರಾಜಕೀಯ ಇಚ್ಛಾಶಕ್ತಿ ಮುಖ್ಯ: ರಸ್ತೆ ಗುಂಡಿ ವಿಚಾರವಾಗಿ ಪ್ರತ್ಯೇಕ ಯೋಜನೆ ರೂಪಿಸುತ್ತೇವೆ. ತ್ಯಾಜ್ಯ ವಿಲೇವಾರಿ ಕುರಿತು ಅಧಿಕಾರಿಗಳ ಸಭೆ ಮಾಡಿದ್ದೇನೆ. ಈ ಬಗ್ಗೆ ಉತ್ತಮ ನಿರ್ವಹಣೆ ಮಾಡುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಲು ತೀರ್ಮಾನಿಸಿದ್ದೇವೆ. ಚೆನ್ನೈ, ಇಂದೋರ್ ಸೇರಿದಂತೆ ಅನೇಕ ಕಡೆಗಳಲ್ಲಿ ಉತ್ತಮ ತ್ಯಾಜ್ಯ ನಿರ್ವಹಣೆ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಾವು ಈ ವಿಚಾರದಲ್ಲಿ ದೀರ್ಘಾವಧಿಯ ಯೋಜನೆ ರೂಪಿಸಿಕೊಳ್ಳಬೇಕು. ಕಾನೂನು ಮಿತಿ, ಭೂಪ್ರದೇಶದ ಮಿತಿಯಲ್ಲಿ ನಾವು ಯೋಜನೆ ರೂಪಿಸಬೇಕು ಎಂದರು.

ಕೇವಲ ಕಸ ತೆಗೆದುಕೊಂಡು ಹೋಗಿ ಸುರಿದರೆ ಆಗುವುದಿಲ್ಲ. ತ್ಯಾಜ್ಯದ ಬೆಟ್ಟ ನಿರ್ಮಿಸಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಇದು ಒಂದು ದಿನ ಅಥವಾ ವರ್ಷದಲ್ಲಿ ಬದಲಾವಣೆ ತರಲು ಆಗುವುದಿಲ್ಲ. ಆದರೂ ಕಾಲಮಿತಿ ನಿಗದಿ ಮಾಡಿಕೊಂಡು ಕೆಲಸ ಮಾಡಬೇಕಿದೆ. ಬೆಂಗಳೂರಿನ ಜನಸಂಖ್ಯೆ 1.30 ಕೋಟಿ ಇದೆ. 50 ಲಕ್ಷದಷ್ಟು ಮಂದಿ ಬೆಂಗಳೂರಿಗೆ ಬಂದು ಹೋಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ರಾಜ್ಯ ಹಾಗೂ ದೇಶಕ್ಕೆ ಬೆಂಗಳೂರಿನಿಂದ ಹೆಚ್ಚಿನ ಪ್ರಮಾಣದ ಹಣ ತೆರಿಗೆ ರೂಪದಲ್ಲಿ ಹೋಗುತ್ತಿದೆ. ಬೆಂಗಳೂರಿಗೆ ಉದ್ಯೋಗ, ಶಿಕ್ಷಣಕ್ಕಾಗಿ ಬಂದವರು ಮತ್ತೆ ತಮ್ಮ ಊರಿಗೆ ಹೋಗುತ್ತಿಲ್ಲ. ಇಲ್ಲೇ ನೆಲೆಸುತ್ತಿದ್ದಾರೆ. ಹೀಗಾಗಿ ನಮ್ಮ ಪ್ರಣಾಳಿಕೆಯಲ್ಲಿ ಬೆಂಗಳೂರಿನ ಹೊರೆ ತಪ್ಪಿಸಲು 2-3ನೇ ದರ್ಜೆ ನಗರಗಳ ಅಭಿವೃದ್ಧಿ, ಎಲ್ಲಾ ಪಂಚಾಯ್ತಿ ಮಟ್ಟದಲ್ಲಿ ಉನ್ನತ ಗುಣಮಟ್ಟದ ಶಿಕ್ಷಣ ನೀಡುವ ಬಗ್ಗೆ ಕಾರ್ಯಕ್ರಮ ರೂಪಿಸಿದ್ದೇವೆ ಎಂದರು.

ಇನ್ನು ಕಳೆದ ಬಾರಿಯ ಬಜೆಟ್ ಅನ್ನು ಹೆಚ್ಚಿನ ಬದಲಾವಣೆ ಮಾಡಲು ಆಗುವುದಿಲ್ಲ. ಹೀಗಾಗಿ ಇದಕ್ಕೆ ಹೊಸ ರೂಪ ನೀಡಲು ಮುಖ್ಯಮಂತ್ರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಪಾಲಿಕೆ ಮಟ್ಟದಲ್ಲಿ ಸಂಪನ್ಮೂಲ ಕ್ರೂಢೀಕರಣದ ಬಗ್ಗೆ ಪ್ರಶ್ನಿಸಿದಾಗ, ‘ನಾನು ಈ ವಿಚಾರವಾಗಿ ಚರ್ಚೆ ಮಾಡಿದ್ದೇನೆ. ಕೆಲವರು ತೆರಿಗೆ ವಂಚನೆ ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳಲ್ಲಿ ಏನು ಮಾಡಬಹುದು ಎಂದು ಚರ್ಚೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.

Leave a Reply

error: Content is protected !!
LATEST
KKRTC ಅಧಿಕಾರಿಗಳ ನಡೆಯಿಂದ ನೊಂದ ತಾಳಿಕೋಟೆ ಘಟಕ ಚಾಲಕನಿಂದ ದಯಾಮರಣಕ್ಕಾಗಿ ರಾಜ್ಯಪಾಲರಿಗೆ ಅರ್ಜಿ KSRTC: ₹30 ಸಾವಿರ ಲಂಚ ಪಡೆದ ಬಳಿಕ ಗುತ್ತಿಗೆ ಚಾಲಕರ ನೇಮಕ - 11 ತಿಂಗಳ ಬಳಿಕ ₹30 ಸಾವಿರದಿಂದ ₹18 ಸಾವಿರಕ್ಕೆ ಇಳಿದ ... ಅಕ್ರಮ ಹಣ ಸಂಪಾದನೆ: ಅಬಕಾರಿ ಉಪ ನಿರೀಕ್ಷಕನಿಗೆ 3 ವರ್ಷ ಕಠಿಣ ಶಿಕ್ಷೆ, ₹50 ಲಕ್ಷ ದಂಡ ಪೋಸ್ಟ್ ಆಫೀಸ್ ಸೇವೆಗಳು ಈಗ ಗ್ರಾಮ ಒನ್ ಕೇಂದ್ರಗಳಲ್ಲೂ ಲಭ್ಯ 5ವರ್ಷದೊಳಗಿನ ಮಕ್ಕಳಿಗೆ PCV ಲಸಿಕೆ ಹಾಕಿಸಿ: ಸುರಳ್ಕರ್ ವಿಕಾಸ್ ಕಿಶೋರ್ KSRTC: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತುಮಕೂರು ಘಟಕ 1-2ರ ಗುತ್ತಿಗೆ ಚಾಲಕರಿಂದ ದಿಢೀರ್‌ ಪ್ರತಿಭಟನೆ ಮೆಜೆಸ್ಟಿಕ್‌: KSRTC ಟಿಸಿಗಳಿಗೆ ಕಂಡಕ್ಟರ್‌ಗಳು ₹10 ಕೊಟ್ಟರಷ್ಟೆ ಲಾಗ್‌ಶೀಟ್‌ ಮೇಲೆ ಸಹಿ ಇಲ್ಲದಿದ್ದರೆ ಕ್ಲಾಸ್‌ !!? ಕನಸನ್ನು ನನಸಾಗಿಸಲು ಪ್ರಯತ್ನ ಮುಖ್ಯ: ಮಕ್ಕಳಿಗೆ ಡಿಸಿಎಂ ಶಿವಕುಮಾರ್ ಕಿವಿಮಾತು KSRTC: ಸಮಸ್ಯೆ  ಹೇಳಿಕೊಂಡು ಬರುವ ನೌಕರರ ಭೇಟಿ ಮಾಡದೆ ಸೂಟ್‌ಕೇಸ್‌ ತಂದವರೊಂದಿಗೆ ಹರಟೆ ಹೊಡೆಯುವ ಕೆಲ ಸಾಹೇಬರೆನಿಸಿಕೊ... ಆಟೋಟದಲ್ಲಿ ಕೂಟದ ಕಟ್ಟಾಳುಗಳು ಬ್ಯುಸಿ: ನೌಕರರು ನಂಬಿ 4ವರ್ಷ ಕಳೆದರೂ ಈಡೇರೇಯಿಲ್ಲ ಬೇಡಿಕೆ - ದಿಕ್ಕು ತಪ್ಪುತ್ತಿದೆಯೇ ...