ಹುಬ್ಬಳ್ಳಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು ಮತ್ತು ನೌಕರರಿಗೆ 38 ತಿಂಗಳ ವೇತನ ಹಿಂಬಾಕಿ ಬಿಡುಗಡೆ ಮತ್ತು ವೇತನ ಪರಿಷ್ಕರಣೆ ಮುಂತಾದ ದೀರ್ಘಾವಧಿಯ ಬೇಡಿಕೆಗಳನ್ನು ಜೂನ್ 15 ರೊಳಗೆ ಈಡೇರಿಸದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಮತ್ತು ವರ್ಕರ್ಸ್ ಫೆಡರೇಶನ್ ಎಚ್ಚರಿಕೆ ನೀಡಿದೆ.
ಈ ಸಂಬಂಧ ಮಾತನಾಡಿರುವ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಡಿ.ಎ.ವಿಜಯಾ, 2020ರ ಜನವರಿ 1ರಿಂದ ಶೇ.15 ರಷ್ಟು ವೇತನವನ್ನು ಸರ್ಕಾರ ಹೆಚ್ಚಳ ಮಾಡಿದೆ. ಆದರೆ ಇಲ್ಲಿಯವರೆವಿಗೂ ಪರಿಷ್ಕೃತ ವೇತನದ ಹಿಂಬಾಕಿಯನ್ನು 4 ನಿಗಮಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ನೀಡಿಲ್ಲ.
ಇನ್ನು KSRTC, NWKRTC, KKRTC ಮತ್ತು BMTC ಈ ನಾಲ್ಕೂ ನಿಗಮಗಳ ನೌಕರರಿಗೆ 38 ತಿಂಗಳ ಬಾಕಿಗೆ ಬೇಕಾಗುವ ಮೊತ್ತ ಸುಮಾರು 1,600 ಕೋಟಿ ರೂ. ರಾಜ್ಯ ಸಾರಿಗೆ ನಿಗಮಗಳು ಈ ಹೊರೆಯನ್ನು ಹೊರಲು ಸಾಧ್ಯವಿಲ್ಲದ ಕಾರಣ ಸರ್ಕಾರವು ಕೂಡಲೇ ಅನುದಾನ ನೀಡಬೇಕು. ಆ ಮೂಲಕ ನೌಕರರಿಗೆ ಸೇರಬೇಕಿರುವ ನ್ಯಾಯಯುತ ಹಣವನ್ನು ಪಾವತಿಸಬೇಕು ಎಂದು ಎಂದು ಭಾಸ್ಕರ್ ಆಗ್ರಹಿಸಿದ್ದಾರೆ.
‘ಶಕ್ತಿ’ ಯೋಜನೆ ಜಾರಿಯಾದ ನಂತರ ಚಾಲಕರು ಮತ್ತು ಕಂಡಕ್ಟರ್‌ಗಳಿಗೆ ಕೆಲಸದ ಹೊರೆ ಹೆಚ್ಚಿದೆ. 50-60 ಸಾಮರ್ಥ್ಯದ ಬಸ್‌ನಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ವಾಹನಗಳು ತಾಂತ್ರಿಕ ತೊಂದರೆಗಳನ್ನು ಎದುರಿಸುತ್ತಿವೆ ಮತ್ತು ವರ್ಕ್‌ಶಾಪ್‌ಗಳಲ್ಲಿ ಕೆಲಸ ಮಾಡುವ ತಂತ್ರಜ್ಞರು ಹೆಚ್ಚಿನ ಹೊರೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ತಾಂತ್ರಿಕ ಸಿಬ್ಬಂದಿಗಳಿಗೂ ಪ್ರೋತ್ಸಾಹ ಧನ ನೀಡಬೇಕು ಎಂದು ಆಗ್ರಹಿಸಿದರು.
ಬಸ್ ಹೊರಡುವ ಮತ್ತು ತಲುಪುವ ಈ ಎರಡು ಸ್ಥಳಗಳ ನಡುವಿನ ಅಂತರ ಮತ್ತು ಪ್ರಯಾಣದ ಸಮಯವನ್ನು ಅವೈಜ್ಞಾನಿಕವಾಗಿ ಲೆಕ್ಕಹಾಕಲಾಗಿದೆ. ನಿಗಮಗಳು ಗಮ್ಯಸ್ಥಾನವನ್ನು ವೈಜ್ಞಾನಿಕವಾಗಿ ತಲುಪಲು ದೂರ ಮತ್ತು ಅಗತ್ಯವಿರುವ ಸಮಯವನ್ನು ಲೆಕ್ಕ ಹಾಕಬೇಕು ಈ ಮೂಲಕ ಚಾಲಕರು ಮತ್ತು ನಿರ್ವಾಹಕರ ಮೇಲೆ ಆಗುತ್ತಿರುವ ಒತ್ತಡವನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಎಲ್ಲವನ್ನು ಜೂನ್ 15ರೊಳಗೆ ಪರಿಹರಿಸದಿದ್ದರೆ ಸಮಸ್ತ ಅಧಿಕಾರಿಗಳು ಮತ್ತು ನೌಕರರನ್ನು ಒಗ್ಗೂಡಿಸಿಕೊಂಡು ಸರ್ಕಾರದ ವಿರುದ್ಧ ತೀವ್ರತರವಾದ ಪ್ರತಿಭಟನೆ ಮಾಡಬೇಕಾಗುತ್ತಿದೆ ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.