ಬಳ್ಳಾರಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ 3000 ಕೋಟಿ ರೂಪಾಯಿ ಮೀಸಲಿಟ್ಟಿದ್ದರೂ, ಅದರ ಸಮರ್ಪಕ ಬಳಕೆ ಆಗುತ್ತಿಲ್ಲ. ಕೆಲಸಗಳು ಆಗದ ಕಾರಣ ಹಣ ವಾಪಸ್ ಹೋಗುತ್ತಿದೆ. ಕಲ್ಯಾಣ ಕರ್ನಾಟಕದಲ್ಲಿ ಹಲವು ಪ್ರಮುಖ ನಾಯಕರಿದ್ದರೂ, ಈ ಭಾಗದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, 75 ವರ್ಷಗಳಿಂದ ಮೂರು ಪಕ್ಷಗಳು ಆಡಳಿತ ಮಾಡಿದ್ದರೂ, ಇನ್ನೂ ಅಭಿವೃದ್ಧಿ ಆಗಿಲ್ಲ. ಹಣವಂತರಿಗೆ ಮಾತ್ರ ಚುನಾವಣೆ ಎನ್ನುವಂತಾಗಿದೆ. ಇಷ್ಟು ವರ್ಷ ರಾಜ್ಯ ಆಳಿದವರು ಏನು ಮಾಡಿದ್ದಾರೆ ಎಂದು ಮತದಾರರೇ ಪ್ರಶ್ನಿಸಿಕೊಳ್ಳಲಿ. ಇವರನ್ನು ಬಿಟ್ಟು ಪರ್ಯಾಯ ಆಯ್ಕೆಗಳತ್ತ ನೋಡಲಿ. ತುಂಗಭದ್ರಾ ಅಣೆಕಟ್ಟು ಹೂಳು ತೆಗೆದರೆ ಈ ಭಾಗಕ್ಕೆ ಅನುಕೂಲವಾಗುತ್ತದೆ. ಆದರೆ, ಆ ಕೆಲಸ ಆಗುತ್ತಿಲ್ಲ ಎಂದು ದೂರಿದರು.
ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕ್ರಮಗಳನ್ನು ನಕಲು ಮಾಡಿ ರಾಜ್ಯದಲ್ಲಿ ಕಾಂಗ್ರೆಸ್ ಉಚಿತಗಳನ್ನು ನೀಡುತ್ತಿದೆ. ಆದರೆ ಅವುಗಳನ್ನು ಸರಿಯಾಗಿ ಜಾರಿ ಮಾಡುವಲ್ಲಿ ವಿಫಲವಾಗಿದ್ದು, ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸುತ್ತಿದೆ. ಪರಿಶಿಷ್ಠ ಜಾತಿ, ವರ್ಗದ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಉಚಿತ ಯೋಜನೆಗಳಿಗೆ ಬಳಸಲಾಗುತ್ತಿದೆ. ಈಗ ರೈತರಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡದೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
ಕನ್ನಡ ಸಂಸ್ಕೃತಿ ಇಲಾಖೆ ನಿಭಾಯಿಸಲಾಗದ ಶಿವರಾಜ್ ತಂಗಡಗಿ ರಾಜೀನಾಮೆ ಕೊಡಲಿ: ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಐದು ಪೈಸೆ ದುಡ್ಡಿಲ್ಲ. ಕರ್ನಾಟಕ ಏಕೀಕರಣಕ್ಕೆ ಅದ್ಧೂರಿ ಕಾರ್ಯಕ್ರಮ ರೂಪಿಸುವುದಾಗಿ ಹೇಳಿದ್ದರು. ಒಟ್ಟು 14 ಅಕಾಡೆಮಿಗಳಿದ್ದು, ಒಂದು ಅಕಾಡೆಮಿಗೂ ಅಧಿಕಾರಿಗಳಿಲ್ಲ. 6 ಪ್ರಾಧಿಕಾರಗಳಿದ್ದು, ಅವಕ್ಕೂ ಹಣ ಇಲ್ಲದಂತಾಗಿದೆ. ಕನ್ನಡ ಸಂಸ್ಕೃತಿಯನ್ನು ಈ ಸರ್ಕಾರ ಕೊಲ್ಲುತ್ತಿದೆ ಎಂದರು.
ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರಿಗೆ ಈ ಖಾತೆಯನ್ನು ನಿಭಾಯಿಸಲು ಆಗುತ್ತಿಲ್ಲ. ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲಿ. ಕನ್ನಡ ಸಂಸ್ಕೃತಿ ಇಲಾಖೆಯನ್ನು ಮುಚ್ಚಲು ಸರ್ಕಾರ ಏನಾದರೂ ಯೋಜಿಸುತ್ತಿದೆಯಾ ಎಂದು ಮುಖ್ಯಮಂತ್ರಿ ಚಂದ್ರು ಪ್ರಶ್ನೆ ಮಾಡಿದರು.