ಮಂಡ್ಯ: ತಮಿಳುನಾಡಿಗೆ ನೀರು ಹರಿಸಿ ಕಾವೇರಿ ಕೊಳ್ಳದ ಜಲಾಶಯಗಳು ಬರಿದಾಗುತತಿರುವುದರಿಂದ ರೈತರು ಫಸಲೊಡ್ಡಲೂ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗಾಂಜಾ ಬೆಳೆಯಲು ನಮಗೆ ಅವಕಾಶ ಕಲ್ಪಿಸಬೇಕು ಇಲ್ಲವೇ ದಯಾ ಮರಣ ನೀಡಿ ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಮೈ ಮೇಲೆ ಸಗಣಿ ಸುರಿದುಕೊಂಡು ಮಂಡ್ಯದಲ್ಲಿ ವಿನೂತನ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಕಾರ್ಯಕರ್ತ ಶಿವಕುಮಾರ ಆರಾಧ್ಯ ಮೈ ಮೇಲೆ ಸಗಣಿ ಸುರಿದುಕೊಂಡು ಪ್ರತಿಭಟಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು.
ಕೆಆರ್ಎಸ್ ಜಲಾಶಯದ ಕಾವೇರಿ ನೀರನ್ನು ಸಂಪೂರ್ಣವಾಗಿ ತಮಿಳುನಾಡಿಗೆ ಹರಿಯಲು ಬಿಟ್ಟಿರುವುದರಿಂದ ಈಗಾಗಲೇ ಜಲಾಶಯಗಳು ಬರಿದಾಗಿವೆ. ಇಂಥ ಸನ್ನಿವೇಶದಲ್ಲಿ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಪ್ರತಿನಿತ್ಯ ಮೂರು ಸಾವಿರ ಕ್ಯೂಸೆಕ್ ನೀರು ಬಿಡಲು ಸೂಚಿಸಿದೆ, ರೈತರಿಗೆ ಭತ್ತ, ರಾಗಿ, ಕಬ್ಬು ಬೆಳೆಯಲು ನೀರಿಲ್ಲದ ಕಾರಣ ಗಾಂಜಾ ಬೆಳೆಯಲು ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಗಾಂಜಾ ಬೆಳೆ ಬೆಳೆಯಲು ಕಾವೇರಿ ನೀರಿನ ಅವಶ್ಯಕತೆಯಿಲ್ಲ, ಮನೆಯ ತಿಪ್ಪೆಯ ಗುಂಡಿ, ಸ್ನಾನ, ಪಾತ್ರೆ ತೊಳೆದ ನೀರು, ಸಸಿಯ ಕುಂಡಗಳಲ್ಲಿ, ಹಿತ್ತಲಿನ ಕೀರೆಮಡಿ ಮತ್ತು ಕೈತೋಟದಲ್ಲಿ ಗಾಂಜಾ ಬೆಳೆ ಬೆಳೆಯಲು ಸಾಧ್ಯವಿದೆ, ಇದರಿಂದ ಸಂಕಷ್ಟ ಕಾಲದಲ್ಲಿ ರೈತರ ಬದುಕು ಮುನ್ನಡಲಿದೆ ಎಂದು ಹೇಳಿದರು.
ಗಾಂಜ ಬೆಳೆಗೆ ಅವಕಾಶ ಮಾಡಿಕೊಡದಿದ್ದರೆ ರಾಷ್ಟ್ರಪತಿಯವರ ಮೂಲಕ ದಯಾಮರಣ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಾತನೂರು ಯೋಗೇಶ್, ನಂಜುಂಡಸ್ವಾಮಿ, ಹೊಸಹಳ್ಳಿ ಶಿವು, ಎಚ್.ಕೆ ಮಂಜುನಾಥ್,ಬಿ.ಟಿ ಶಿವಲಿಂಗಯ್ಯ, ಶಿವಣ್ಣ ಇತರರಿದ್ದರು.