ಹನೂರು: ತಾಲೂಕಿನ ಪಿ.ಜಿ. ಪಾಳ್ಯ ಗ್ರಾಮದ ಅಡ್ಡ ರಸ್ತೆ ಬಳಿ ಆಕ್ರಮವಾಗಿ ಹುಲಿ ಉಗುರು ಹಾಗೂ ಹಲ್ಲುಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ಅಂಡೆಕುರುಬರ ದೊಡ್ಡಿ ಗ್ರಾಮದ ಗೋಪಾಲ ಹಾಗೂ ರಾಯಚೂರು ಜಿಲ್ಲೆಯ ಹನುಮೇಶ ಬಂಧಿತರು.
ಘಟನೆ ವಿವರ : ಜ.16 ರಂದು ಸಂಜೆ 8 ರ ಸಮಯದಲ್ಲಿ, ಕಚೇರಿಯಲ್ಲಿದ್ದಾಗ ಭಾತ್ಮಿದಾರರ ಮಾಹಿತಿ ಬಂದ ಮೇರೆಗೆ ಹನೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಿ.ಜಿ.ಪಾಳ್ಯ ಗ್ರಾಮದ ಅಡ್ಡರಸ್ತೆ, ಹತ್ತಿರ ಕೆ.ಎ-10 ಎಲ್-3616 ಹೀರೋ ಹೊಂಡಾ ಗ್ಲಾಮರ್ ನಲ್ಲಿ ಯಾರೋ ಆಸಾಮಿಗಳು ಹುಲಿಯ ಉಗುರುಗಳನ್ನು ಆಕ್ರಮವಾಗಿ ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದುದನ್ನು ಪತ್ತೆಮಾಡಿ ಅವರ ಬಳಿ ಇದ್ದ ವನ್ಯಜೀವಿ ಹುಲಿಯ 40 ಉಗುರುಗಳು ಹಾಗೂ ಹುಲಿಯ 02 ಹಲ್ಲುಗಳು ಆರೋಪಿಗಳಿಬ್ಬರ ಸಮೇತ ವಶಕ್ಕೆ ಪಡೆಯಲಾಗಿದೆ.
ಹುಲಿಯ ಉಗುರುಗಳು ಹಾಗೂ ಹಲ್ಲುಗಳನ್ನು ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದುದು ವನ್ಯಜೀವಿ ಸಂರಕ್ಷಾಣಾ ಕಾಯ್ದೆ 1972 ರ ಅಡಿಯಲ್ಲಿ ಅಪರಾಧ ಮಾಡಿರುವುದು ಕಂಡು ಬಂದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ದಾಳಿಯಲ್ಲಿ ಪಿಎಸ್ಐ ವಿಜಯ್ ರಾಜ್, ಮುಖ್ಯಪೇದೆಗಳಾದ ಶಂಕರ್, ಬಸವರಾಜು, ಸ್ವಾಮಿ, ರಾಮಚಂದ್ರ, ಚಾಲಕ ಪ್ರಭಾಕರ್ ಇತರರು ಇದ್ದರು.