NEWSಕೃಷಿನಮ್ಮರಾಜ್ಯ

ಬನ್ನೂರು: ದೆಹಲಿ ಚಲೋಗೆ ತೆರಳಿದ್ದ ರೈತರ ಬಂಧನ ಖಂಡಿಸಿ ಹೆದ್ದಾರಿ ತಡೆದು ಅನ್ನದಾತರ ಆಕ್ರೋಶ

ವಿಜಯಪಥ ಸಮಗ್ರ ಸುದ್ದಿ

ಬನ್ನೂರು: ದೆಹಲಿ ಚಲೋಗೆ ತೆರಳಿದ್ದ ರೈತರನ್ನು ಮಧ್ಯಪ್ರದೇಶದಲ್ಲಿ ಬಂಧಿಸಿದ್ದನ್ನು ಖಂಡಿಸಿ ಬನ್ನೂರು ಸಂತೆಮಾಳ ಬಳಿ ಮಳವಳ್ಳಿ – ಮೈಸೂರು ಮುಖ್ಯ ರಸ್ತೆಯ ಬಂದ್‌ ಮಾಡಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರೈತರು ರಸ್ತೆ ತಡೆ ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಮಾತನಾಡಿ, ಇಂದು ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಕೇಂದ್ರ ಸರ್ಕಾರ ದೇಶದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯಂತೆ ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೇ ಒತ್ತಾಯಿಸಲಾಗುತ್ತಿದೆ.

ಇಂದು ದೆಹಲಿಯಲ್ಲಿ ನಡೆಯುತ್ತಿರುವ ಈ ಹೋರಾಟದಲ್ಲಿ ಭಾಗವಹಿಸಲು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕರ್ನಾಟಕದ 250ಕ್ಕೂ ಹೆಚ್ಚು ರೈತರನ್ನು ತಡ ರಾತ್ರಿ ಸುಮಾರು 2 ಗಂಟೆಯಲ್ಲಿ ಬಂಧಿಸಿರುವುದು ಖಂಡನೀಯ. ಕೇಂದ್ರ ಸರ್ಕಾರ ಹಿಟ್ಲರ್‌ ಧೋರಣೆ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.

ಮಧ್ಯಪ್ರದೇಶದ ಭೂಪಾಲ್ ರೈಲ್ವೆ ನಿಲ್ದಾಣದಲ್ಲಿ ಅಲ್ಲಿಯ ಪೊಲೀಸರು ಕರ್ನಾಟಕದ ರೈತರನ್ನು ಉಗ್ರಗಾಮಿಗಳು ಹಾಗೂ ಡಕಾಯಿತರ ರೀತಿ ಬಂಧನ ಮಾಡಿರುವುದು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಕ್ರಮ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಹೋರಾಟಕ್ಕೆ ಹೊರಟಿದ್ದ ರೈತರ ಹಕ್ಕುಗಳನ್ನು ಕಸಿದು ಕೊಳ್ಳುತಿದ್ದು ಇದು ದೇಶಕ್ಕೆ ಮಾರಕ. ರೈತರ ಹೆಸರು ಹೇಳಿಕೊಂಡು ವಿಶ್ವದಾದ್ಯಂತ ತಿರುಗಾಡುತ್ತಿರುವ ನೀವು ಇದೇ ರೀತಿ ನಡೆದುಕೊಂಡರೆ ಫೆ.13ರಂದು ಅಂದರೆ ಇಂದು ದೆಹಲಿಯಲ್ಲಿ ಹಮ್ಮಿಕೊಂಡಿರುವ ಈ ಹೋರಾಟಕ್ಕೆ ಕರ್ನಾಟಕದಿಂದ ಮತ್ತೆ 500ಕ್ಕೂ ರೈತರು ಪ್ರಯಾಣ ಬೆಳೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಮ್ಮ ರಾಜ್ಯದ ಅನ್ನದಾತರನ್ನು ಮಧ್ಯ ಪ್ರದೇಶದ ಭೂಪಾಲ್‌ನಲ್ಲಿ ಅಕ್ರಮವಾಗಿ ಇರಿಸಿಕೊಂಡಿದ್ದು ಇಂದು ಅವರನ್ನು ನೂರಾರು ಪೊಲೀಸರ ಸರ್ಫ ಗಾವಲಿನಲ್ಲಿ ಉಜ್ಜನಿಗೆ ಕರೆದುಕೊಂಡು ಹೋಗಿದ್ದಾರೆ. ರೈಲಿನಲ್ಲಿ ಏಕಾಏಕಿ ನುಗ್ಗಿ ಬಂಧನ ಮಾಡಿರುವ ಕೇಂದ್ರ ಸರ್ಕಾರದ ನಡೆ ಖಂಡನೀಯ. ಕೂಡಲೇ ಬಂಧಿಸಿರುವ ರೈತರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಮೋದಿ ನೀವು ಕೇವಲ ಭಾಷಣದಲ್ಲಿ ರೈತರ ಬಗ್ಗೆ ಕರುಣೆ ಸೌಹಾರ್ದತೆ ವ್ಯಕ್ತ ಪಡಿಸಿದರೆ ಸಾಲದು. ಅವರನ್ನು ಅದೇ ರೀತಿ ನಡೆಸಿಕೊಳ್ಳಬೇಕು. ಇಲ್ಲ ಇದೇ ವರ್ತನೆ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ. ಇನ್ನು ಅಕ್ರಮವಾಗಿ ಬಂಧಿಸಿರುವ ರೈತರನ್ನು ಕೂದಲೇ ಬಿಡುಗಡೆ ಮಾಡಿ ಹೋರಾಟದ ಸ್ಥಳಕ್ಕೆ ಸುರಕ್ಷಿತವಾಗಿ ತಲುಪಿಸಬೇಕು ತಪ್ಪಿದರೆ ನಿತ್ಯವೂ ವಿಭಿನ್ನಾ ರೀತಿಯ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಕಿರಗಸೂರು ಶಂಕರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ.ಪಿ. ಪರಶಿವ ಮೂರ್ತಿ, ತಾಲೂಕು ಉಪಾಧ್ಯಕ್ಷ ಹೆಗ್ಗೂರು ರಂಗರಾಜು, ತಾಲೂಕು ಸಂಘಟನಾ ಕಾರ್ಯದರ್ಶಿ ಯಾಕನೂರು ರಾಜೇಶ್, ರೈತ ಮುಖಂಡರಾದ ಬನ್ನೂರು ಸೂರಿ, ಬಿ.ಎನ್.ಶ್ರೀನಿವಾಸ, ಕುಂತನಹಳ್ಳಿ ಸ್ವಾಮಿ, ಮೆಡಿಕಲ್ ಮಹೇಶ್, ನಟೇಶ್, ಹನುಮನಾಳು ಲೋಕೇಶ್, ಕರುವಟ್ಟಿ ಶಂಭು, ಹೊನ್ನಯ್ಯ, ಲೋಕೇಶ್, ಅತ್ತಹಳ್ಳಿ ಎ.ಆರ್.ರಾಮು, ದೀಪು, ಜೂನಿಯರ್ ರಾಜ್ ಕುಮಾರ್ ಸೇರಿದಂತೆ ನೂರಕ್ಕೂ ಹೆಚ್ಚು ರೈತರು ಇದ್ದರು.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ